ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅವರಿಗೆ 83 ವರ್ಷ ವಯಸ್ಸಾಗಿತ್ತು. ‘ಕಾಡುಕುದುರೆ’ ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ನಿಧನರಾಗಿದ್ದಾರೆ.
1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.
ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. 1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ “ರಜತಕಮಲ್” ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು.
ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಾಷ್ಟ್ರ ಪ್ರಶಸ್ತಿಯಲ್ಲದೆ, ‘ಕನ್ನಡ ಕಂಪು’ ಪ್ರಶಸ್ತಿ, ‘ಸುಂದರಶ್ರೀ ಪ್ರಶಸ್ತಿ’, ‘ಶಿಶುನಾಳ ಷರೀಫ್ ಪ್ರಶಸ್ತಿ’, ‘ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಗೌರವ’, ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ’ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂದಿವೆ.
ಇವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸೇರಿ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.