ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ.
ರಿಯಾದ್: ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ.
ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷ ಪ್ರಾಯದ ರಿಝ್ವಾನ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್ ಮತ್ತು ಬಾಂಗ್ಲಾದೇಶದ ಇನ್ನೋರ್ವ ಪ್ರಜೆ ನಾಸೀರ್ ಎಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್-ಹಸಾ ಎಂಬ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಝ್ವಾನ್ ಅವರು 4 ತಿಂಗಳ ಹಿಂದೆಯಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೆಬಿಯಾಕ್ಕೆ ತೆರಳಿದ್ದರು.
ಅವರು ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ನಾಲ್ಕು ಮಂದಿ ಮಕ್ಕಳ ಪೈಕಿ ಏಕೈಕ ಪುತ್ರರಾಗಿದ್ದಾರೆ.
ಮೃತಪಟ್ಟವರೆಲ್ಲ ಅಲ್ಲಿನ ಸಾಕ್‌ಖೊ ಎಂಬ ಕಂಪನಿಯ ಉದ್ಯೋಗಿಗಳಾಗಿದ್ದು ರಾತ್ರಿ ವೇಳೆ ಕೆಲಸಕ್ಕೆ ತೆರಳುತ್ತಿರುವಾಗ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ವಾಹನ ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತ ಶರೀರಗಳನ್ನು ಅಲ್ಲಿನ ಅಲ್-ಹಸಾ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದ್ದು, ಊರಿಗೆ ತರಿಸುವ ಬಗ್ಗೆ ಮಂಗಳೂರಿನ ಸಂಘಟನೆಗಳ ಪ್ರಮುಖರು ಪ್ರಯತ್ನ ನಡೆಸುತ್ತಿದ್ದಾರೆ.