ಮಂಗಳೂರು: ಅಕ್ರಮವಾಗಿರುವ ಸುರತ್ಕಲ್ ಟೋಲ್‌ಗೇಟನ್ನು ತೆರವುಗೊಳಿಸಲೇಬೇಕೆಂದು ಒತ್ತಾಯಿಸಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಟೋಲ್‌ಗೇಟ್ ಬಳಿ ನಡೆಸುತ್ತಿರುವ ಹಗಲು ರಾತ್ರಿ ಧರಣಿ ಇಂದಿಗೆ 21ನೇ ದಿನವನ್ನು ಪೂರೈಸಿದೆ.
ಗುರುವಾರವೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟಗಾರರು ಪ್ರತಿಭಟನೆ ನಡೆಸಿದರು. ತೊಲಗಲೇ ಬೇಕು…ಲೂಟಿ ಕೇಂದ್ರ ತೊಲಗಬೇಕು, ಸಂಸದರೇ, ಶಾಸಕರೇ ನಿಮಗೆ ಈ ಲೂಟಿಯನ್ನು ನಿಲ್ಲಿಸಲು ಇನ್ನೂ ಸಾಧ್ಯವಾಗಿಲ್ಲವೇ ಎಂದು ಪ್ರತಿಭಟನಾಕಾರರು ಸಂಸದ ನಳಿನ್‌ಕುಮಾರ್, ಶಾಸಕ ಭರತ್ ಶೆಟ್ಟಿ ಸಹಿತ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು.
ಇನ್ನು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ನಮ್ಮ ಹೋರಾಟ ಸಮಿತಿ ನಿರಂತರವಾಗಿ ಕಳೆದ 21 ದಿನಗಳಿಂದ ಪ್ರತಿಭಟನೆಯನ್ನು ಮಾಡಿಕೊಂಡು ಬಂದಿದೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಟೋಲ್‌ಗೇಟ್ ರದ್ದಾಗಿದೆ ಎಂದು ಹೇಳಿಕೆ ನೀಡಿ 24 ಗಂಟೆಗಳು ಕಳೆದು ಹೋಗಿದ್ದರೂ ಇನ್ನೂ ಇಲ್ಲಿ ಶುಲ್ಕ ಪಾವತಿ ಮುಂದುವರಿಯುತ್ತಲೇ ಇದೆ.
ಇದು ಯಾವಾಗ ನಿಲ್ಲುತ್ತದೆ ಎಂದು ಸಂಸದರಿಗೂ ಗೊತ್ತಿಲ್ಲ. ಇನ್ನು ಈ ಟೋಲ್‌ಗೇಟನ್ನು ಹೆಜಮಾಡಿ ಟೋಲ್ ಜೊತೆ ವಿಲೀನ ಮಾಡಲು ಮುಂದಾಗಿದ್ದಾರೆ.
ಇದರಿಂದ ಹೆಚ್ಚುವರಿ ಹೊರೆಯನ್ನು ಜನತೆ ಅನುಭವಿಸಬೇಕಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಟೋಲ್ ಶುಲ್ಕ ರದ್ದು ಮಾಡಬೇಕೆನ್ನುವ ಇರಾದೆ ಇನ್ನೂ ಬಂದಿಲ್ಲ.
ಹೀಗಾಗಿ ಶುಲ್ಕ ಮುಂದುವರಿದಿದೆ. ಸುರತ್ಕಲ್ ಟೋಲ್‌ಗೇಟಿನಲ್ಲಿ ಶುಲ್ಕ ಪಡೆಯುವುದನ್ನು ನಿಲ್ಲಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತಲೇ ಇರುತ್ತದೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ಬಿ ಕೆ ಇಮ್ತಿಯಾಝ್, ಮಾಜಿ ಮೇಯರ್ ಕೆ ಅಶ್ರಫ್ ಸಹಿತ ಹಲವು ಮಂದಿ ಭಾಗವಹಿಸಿದ್ದಾರೆ.