ಬಂಟ್ವಾಳ: ಇಲ್ಲಿನ ಅಮ್ಟೂರು ಗ್ರಾಮದ ರಾಯಪ್ಪ ಕೋಡಿ ವರ್ಕ್ ಶಾಪ್ನಲ್ಲಿ ನಿಲ್ಲಿಸಿದ್ದ ಪಿಕಪ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದರು.
ಬಂಧಿತರನ್ನು ಲತೀಶ್ ಜೋಗಿ, ವಿಶ್ವನಾಥ್, ರವಿಕಿರಣ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಟೂರು ಗ್ರಾಮದ ರಾಯಪ್ಪ ಕೊಡಿಯಲ್ಲಿರುವ ಅಪೊಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯ ವರ್ಕ್ ಶಾಪ್ ಮತ್ತು ದಾಸ್ತಾನು ಕೊಠಡಿಯ ಆವರಣದಲ್ಲಿ ಏ.5 ರಂದು ಸಂಜೆ ನಿಲ್ಲಿಸಿದ್ದ ಪಿಕ್ಅಪ್ ವಾಹನ ನಾಪತ್ತೆಯಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಕಾಸರಗೋಡಿನ ಮಂಜೇಶ್ವರದ ಲತೀಶ್ ಜೋಗಿ, ವಿಶ್ವನಾಥ್, ರವಿಕಿರಣ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಸದ್ರಿ ಆರೋಪಿಗಳಿಂದ ಪಿಕಪ್ ವಾಹನ,
ವೆಲ್ಡಿಂಗ್ ಮಿಷನ್, ಕಂಪ್ಯೂಟರ್ ಮಾನಿಟರ್, ಮೌಸ್, 7020 ರೂಪಾಯಿ ನಗದು ಹಣ ಸೇರಿ 2,48, 670 ಲಕ್ಷ ರೂಪಾಯಿ ಮೌಲ್ಯ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನಕ್ಕೆ ಉಪಯೋಗಿಸಿದ ಮೋಟರ್ ಸೈಕಲ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದಲ್ಲಿ ಆರೋಪಿ ಮತ್ತು ಕಳವು ಮಾಲು ಪತ್ತೆ ಹಚ್ಚಲು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೃಷಿಕೇಶ್ ಭಗವಾನ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಮಾರ್ಗದರ್ಶನದಂತೆ
ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ವಿವೇಕಾನಂದ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರರಾದ ಅವಿನಾಶ್ ಮತ್ತು ಕಲೈಮಾರ್ ಹಾಗೂ ಸಿಬ್ಬಂದಿ ನಾರಾಯಣ,
ಇರ್ಷಾದ್, ಮನೋಹರ್, ಗಣೇಶ್, ರಾಘವೇಂದ್ರ, ನಾಗರಾಜ್, ಮೋಹನ್ ಹಾಗೂ ತಾಂತ್ರಿಕ ಸಿಬ್ಬಂದಿ ಸಂಪತ್ ಮತ್ತು ದಿವಾಕರ್ ರವರನ್ನ ಒಳಗೊಂಡ ಎರಡು ತಂಡಗಳನ್ನು ರಚಿಸಿಕೊಂಡು ಆರೋಪಿ ಪತ್ತೆಗೆ ಶ್ರಮಿಸಿದ್ದಾರೆ.