ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ, ಪೋಸ್ಟ್ ಹಾಕಿದ್ದ ಹಿಂದು ವ್ಯಕ್ತಿ ಟೈಲರ್ ಕನ್ಹಯ್ಯ
ಎಂಬಾತನನ್ನು ರಾಜಸ್ಥಾನದ ಉದಯಪುರದಲ್ಲಿ ಜೂ.28ರಂದು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆ ಮಾಡಿ ವಿಡಿಯೋ ಹರಿಯಬಿಟ್ಟಿದ್ದರು. ಈ ಹತ್ಯೆ ಪ್ರಕರಣ ದೇಶಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.
ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಎಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದೀಗ ಟೈಲರ್ ಕನ್ಹಯ್ಯ ಹತ್ಯೆಗೂ ಮುನ್ನವೇ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ.
ಕನ್ಹಯ್ಯ ಲಾಲ್ ಕೊಲೆಯಾಗುವ ಒಂದು ವಾರದ ಮೊದಲೇ ಅಂದರೆ, ಜೂ.21ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದರಾವ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಉಮೇಶ್ ಪುತ್ರ ಸಂಕೇತ್ ಅಮರಾವತಿಯ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,
ಮುದಸ್ಸಿರ್ ಅಹ್ಮದ್, ಶಾರುಖ್ ಪಠಾಣ್, ಅಬ್ದುಲ್ ತೌಫಿಕ್, ಶೋಯೆಬ್ ಖಾನ್, ಅತಿಬ್ ರಶೀದ್ ಎಂಬುವವರನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಈ ಪ್ರಕರಣವನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.