ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ನಾದಿನಿ ಜೊತೆ ಲವ್ವಿ ಡವ್ವಿಗೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಮುದ್ದಾದ ಪತ್ನಿಯನ್ನೇ ಕೊಂದು ಅನಾರೋಗ್ಯದಿಂದ ತೀರಿಕೊಂಡಿದ್ದಾಳೆಂದು ಕಥೆ ಕಟ್ಟಿದ ಗಂಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೃತ ದುರ್ದೈವಿ ಶ್ವೇತಾ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮದ ಶ್ವೇತಾ (30) ಮೃತ ದುರ್ದೈವಿ. ಹಿರಿಯೂರು ತಾಲೂಕಿನ ಕುರುಬರಹಳ್ಳಿ ಚೌಡೇಶ್ (35) ಆರೋಪಿ.
9 ವರ್ಷಗಳ ಹಿಂದೆ ಶ್ವೇತಾ ಮತ್ತು ಚೌಡೇಶ್ಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ಬಾಡಿಗೆ ಮನೆಯಲ್ಲಿದ್ದರು.
ಈ ಮಧ್ಯೆ ಪತ್ನಿ ಶ್ವೇತಾ ತಂಗಿ ಮೇಲೆ ಚೌಡೇಶ್ಗೆ ಕಣ್ಣು ಬಿದ್ದಿತ್ತು. ಆಕೆಯನ್ನು ಬಣ್ಣ ಬಣ್ಣದ ಮಾತುಗಳಿಂದ ಪುಸಲಾಯಿಸಿ ಆಕೆ ಜೊತೆ ಲವ್ವಿಡವ್ವಿ ಮಾಡುತ್ತಿದ್ದ.
ಪತಿ ಚೌಡೇಶ್
ಕೆಲವೇ ದಿನಗಳಲ್ಲಿ ಇದು ಪತ್ನಿ ಶ್ವೇತಾಳಿಗೆ ತಿಳಿದಿತ್ತು.
ಆಗಾಗ್ಗೆ ಈ ಬಗ್ಗೆ ಗಲಾಟೆ ಮಾಡುತ್ತಿದ್ದಳು. ಮೇ.3ರಂದು ಗಂಡ ಹೆಂಡತಿ ಗಲಾಟೆ ತಾರಕಕ್ಕೇರಿದಾಗ ಗಂಡ ಶ್ವೇತಾಳಿಗೆ ಹಲ್ಲೆ ನಡೆಸಿ ಕುತ್ತಿಗೆ ಹಿಚುಕಿ ಸಾಯಿಸಿದ್ದ.
ನಂತರ ಆಕೆ ಲೋ ಬೀಪಿಯಿಂದ ಆಸ್ಪತ್ರೆಗೆ ದಾಖಲಿಸುವ ಮಧ್ಯೆ ಮೃತಪಟ್ಟಿದ್ದಾಳೆಂದು ಶ್ವೇತಾ ಮನೆಯವರಿಗೆ ತಿಳಿಸಿದ್ದ.
ಕುಟುಂಬಸ್ಥರು ಬಂದು ಶವ ಪರಿಶೀಲಿಸಿದಾಗ ಕುತ್ತಿಗೆ ಬಿಗಿದಿರುವ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಶ್ವೇತಾ ಪಾಲಕರು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನನ್ವಯ ಚೌಡೇಶ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅನೈತಿಕ ಸಂಬಂಧ ಬಯಲಾಗಿದೆ.