ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸೋಮವಾರ ಸುರಿದ ಭಾರಿ ಮಳೆ ನಾಡದೋಣಿ ಮೀನುಗಾರರ ಬದುಕನ್ನೆ ಕಸಿದುಕೊಂಡಿದೆ.
ಆದಾಯಕ್ಕೆ ಆಧಾರವಾಗಿದ್ದ ದೋಣಿಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು ಬಡ ಮೀನುಗಾರರು ದಿಕ್ಕು ತೋಚದಂತಾಗಿದ್ದಾರೆ. ಈ ಬಾರಿ ಮಳೆಗಾಲ ಪ್ರಾರಂಭದ ದಿನಗಳಲ್ಲಿ ಇವರು ಉತ್ತಮ ಮೀನುಗಾರಿಕೆ ನಡೆಸಿದರು.
ಸಿಗಡಿ, ಮೀನುಗಳು ಹೇರಳವಾಗಿ ದೊರೆತು ಕೈ ತುಂಬಾ ಆದಾಯವಾಗಿತ್ತು. ಆದರೆ ಸೋಮವಾರ ಸಂಭವಿಸಿದ ಮೇಘಸ್ಪೋಟ ಎಲ್ಲವನ್ನು ಕಸಿದುಕೊಂಡಿದೆ.
ಮೀನುಗಾರಿಕೆಗೆ ತೆರಳಲು ಕಡಲತೀರದಲ್ಲಿ ಲಂಗರು ಹಾಕಿದ್ದ ದೋಣಿಗಳು ಮಳೆಯ ನೀರಿನ ರಭಸಕ್ಕೆ ಸಮುದ್ರದ ಪಾಲಾಗಿವೆ. ಅನೇಕ ದೋಣಿಗಳನ್ನು ಮೀನುಗಾರರು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ.
ಮುಂಡಳ್ಳಿ, ಬಂದರ, ತೆಂಗಿನಗುಂಡಿ ಹಾಗೂ ಅಳ್ವೆಕೋಡಿ ಭಾಗದಲ್ಲಿ ನೆರೆಗೆ 130 ಮೀನುಗಾರರ ದೋಣಿಗಳಿಗೆ ಸಂಪೂರ್ಣ ಹಾನಿಯಾಗಿದೆ. 75 ದೋಣಿಗಳಿಗೆ ಭಾಗಶಃ ಹಾನಿಯಾಗಿದೆ. 208 ದೋಣಿಗಳ ಬಲೆ ಸಮುದ್ರ ಪಾಲಾಗಿದೆ.
ಲಕ್ಷ್ಮಿ ನಾರಾಯಣ ನಾಯ್ಕ ಎಂಬುವವರ ಮನೆಯ ಮೇಲೆ ಗುಡ್ಡ ಕುಸಿದು ಅನಂತನಾಯ್ಕ(35), ಮಗಳು ಲಕ್ಷ್ಮಿ ನಾಯ್ಕ, (40) ಮೊಮ್ಮಗ ಪ್ರವೀಣ್ (16) ಒಟ್ಟು ನಾಲ್ಕು ಜನ ಭೂಸಮಾಧಿಯಾಗಿದ್ದರು.
ಭಟ್ಕಳದಲ್ಲಿ ಮಹಾ ಮಳೆಯಿಂದ ಒಟ್ಟಾರೆ ಅಂದಾಜು 40 ಕೋಟಿ ನಷ್ಟವಾಗಿದೆ. 1500 ಹೆಚ್ಚಿನ ಅಂಗಡಿಗಳಿಗೆ ನೀರು ನುಗ್ಗಿ ನಷ್ಟವಾಗಿದೆ.
ಮೀನುಗಾರಿಕಾ ದೋಣಿಗಳಿಗೆ ಹಾನಿ ಆಗಿದೆ, ಇವೆಲ್ಲದಕ್ಕೂ ಪರಿಹಾರ ನೀಡುವುದರ ಜೊತೆಗೆ ಸಾವನಪ್ಪಿದ ಕುಟುಂಬದ ಮಕ್ಕಳಿಗೆ ಸರ್ಕಾರದ ವತಿಯಿಂದ ಶಿಕ್ಷಣದ ವೆಚ್ಚ ಭರಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.