ಮಂಗಳೂರು: ಕರಾವಳಿಯಲ್ಲಿ ಕೇಳಿ ಬರುತ್ತಿರುವ ಕೊರಗಜ್ಜನ ಕೋಲಕ್ಕೆ ಸಂಬಂಧಿಸಿದಂತೆ ದೈವಗಳ ಹೆಸರಿನಲ್ಲಿ ದಂಧೆಗೆ ಇಳಿದವರ ವಿರುದ್ಧ ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಲಾಗಿದೆ.
ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಮಾಡಲಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ಕೂಡಾ ಸಮಿತಿ ನಿರ್ಧಾರ ಕೈಗೊಂಡಿದೆ. ಆದಿ ಸ್ಥಳ ಮತ್ತು ತುಳುನಾಡು ಹೊರತು ಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ.
ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ಮೈಸೂರು ಮೂಲದ ಕೆಲ ಭಕ್ತರಿಂದಲೂ ಆದಿ ಸ್ಥಳದಲ್ಲಿ ಪ್ರಾರ್ಥನೆ ಮಾಡಲಾಗಿದೆ. ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ವ್ಯವಹಾರದ ಉದ್ದೇಶವಾಗಿದೆ. ಇದನ್ನ ತಡೆದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಸಿನಿಮಾ ಮತ್ತು ಸಾಮಾಜಿಕ ಜಾಲ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ. ಇದನ್ನ ನಿಲ್ಲಿಸಬೇಕು.
ಇಲ್ಲದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಕರಾವಳಿಯ ದೈವಾರಾಧಕರು ನೀಡಿದ್ದಾರೆ. ಇದಲ್ಲದೇ ಕಾಂತಾರಾ ಚಿತ್ರತಂಡದ ವಿರುದ್ಧವೂ ದೈವಾರಾಧಕರ ಆಕ್ರೋಶ ವ್ಯಕ್ತವಾಗಿದೆ.
ದೈವಾರಾಧನೆ ಯನ್ನು ಬಳಸಿ ಹಣ ಮಾಡಿದ್ದಾರೆ.ಆದರೆ ದೈವಾರಾಧನೆಗೆ ಅಪಚಾರ ಆದಾಗ ತುಟಿ ಬಿಚ್ಚಿಲ್ಲ. ಮುಂದೆ ದೈವಾರಾಧನೆ ಗೆ ಸಂಬಂಧಿಸಿದ ಯಾವುದೇ ಚಿತ್ರ ಬಂದರೂ ವಿರೋಧ ವ್ಯಕ್ತಪಡಿಸುವ ಎಚ್ಚರಿಕೆಯನ್ನು ದೈವಾರಾಧಕರು ನೀಡಿದ್ದಾರೆ.