ಕರಾವಳಿಯ ವಾಣಿಜ್ಯ ಹೆಬ್ಬಾಗಿಲು ನವ ಮಂಗಳೂರು ಬಂದರಿಗೆ ಯೂರೋಪ್‌ನ ಮಾಲ್ಟಾದಿಂದ ಬೃಹತ್ ವಿಲಾಸಿ ಪ್ರವಾಸಿಗರ ಹಡಗು ಸೋಮವಾರ ಮುಂಜಾನೆ 6.30 ಹೊತ್ತಿಗೆ ಆಗಮಿಸಿತ್ತು.
ಮಂಗಳೂರು : ಕರಾವಳಿಯ ವಾಣಿಜ್ಯ ಹೆಬ್ಬಾಗಿಲು ನವ ಮಂಗಳೂರು ಬಂದರಿಗೆ ಯೂರೋಪ್‌ನ ಮಾಲ್ಟಾದಿಂದ ಬೃಹತ್ ವಿಲಾಸಿ ಪ್ರವಾಸಿಗರ ಹಡಗು ಸೋಮವಾರ ಮುಂಜಾನೆ 6.30 ಹೊತ್ತಿಗೆ ಆಗಮಿಸಿತ್ತು.
271 ಪ್ರಯಾಣಿಕರು ಹಾಗೂ 373 ಮಂದಿ ಹಡಗಿನ ಸಿಬ್ಬಂದಿಗಳನ್ನು ಒಳಗೊಂಡ ಈ ಬೃಹತ್ ಪ್ರವಾಸೋದ್ಯಮ ಹಡಗು ‘MS EUROPA 2’ ಅನ್ನು ಎನ್ ಎಂ ಪಿ ಎ ಆಡಳಿತ ಮಂಡಳಿ ಆತ್ಮೀಯವಾಗಿ ಸ್ವಾಗತಿಸಿತು.
224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲದ ಈ ಪ್ರಯಾಣಿಕ ಹಡಗು ಗೋವಾ ಮರ್ಮಗೋವಾ ಬಂದರಿನಿಂದ ಮಂಗಳೂರಿಗೆ ಆಗಮಿಸಿದ್ದು, ಇಲ್ಲಿಂದ ಕೊಚ್ಚಿನ್ ಬಂದರಿಗೆ ತೆರಳಿದೆ. ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್ ಬಳಿಕ ಸುಮಾರು ಎರಡು ವರ್ಷಗಳ ಬಳಿಕ ಅಂತರಾಷ್ಟ್ರೀಯ ಪ್ರವಾಸಿ ಹಡಗುಗಳನ್ನು ಎನ್‌ಎಂಪಿಎ ಅಧ್ಯಕ್ಷರ ಸೂಚನೆ ಮೇರೆಗೆ ಬರಮಾಡಿಕೊಳ್ಳಲು ಸಕಲ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ.
ಈ ಪ್ರಯಾಣಿಕರಿಗಾಗಿಯೇ ಪ್ರತ್ಯೇಕವಾಗಿ ಸುಸಜ್ಜಿತ ಕ್ರೂಸ್ ಟರ್ಮಿಲ್ ಅನ್ನು ಸಜ್ಜುಗೊಳಿಸಿತ್ತು.
ಪ್ರಯಾಣಿಕರ ವೈದ್ಯಕೀಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿತ್ತು,
11 ವಲಸೆ ಮತ್ತು 04 ಕಸ್ಟಮ್ಸ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು, ಆರು ಬಸ್ ಮತ್ತು ಕಾರುಗಳು, 15 ಪ್ರಿಪೇಯ್ಡ್ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗೆ ಸಿದ್ಧವಾಗಿ ಇರಿಸಲಾಗಿತ್ತು.
ಪ್ರಯಾಣಿಕರು ಮಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು;
ಸೇಂಟ್ ಅಲೋಶಿಯಸ್, ಕದ್ರಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಉಡುಪಿ ದೇವಸ್ಥಾನ, ಗೋಮಟೇಶ್ವರ, ಮೂಡಬಿದಿರೆಯ 1000 ಪಿಲ್ಲರ್ ಟೆಂಪಲ್ & ಫೋರಂ ಫಿಜಾ ಮಾಲ್ ಗಳನ್ನು ಸುತ್ತಿ ಮಂಗಳೂರು ಜನರ ಆತಿಥ್ಯ ಮತ್ತು ಸಾಂಸ್ಕೃತಿಕ ಅನುಭವವನ್ನು ಸವಿದ ನಂತರ ಪ್ರಯಾಣಿಕರು ಮಂಗಳೂರಿನ ಅಚ್ಚುಮೆಚ್ಚಿನ ನೆನಪುಗಳೊಂದಿಗೆ ತಮ್ಮ ಹಡಗಿಗೆ ಮರಳಿದರು.
ಸುಮಾರು ಮೂರು ಗಂಟೆ ಹೊತ್ತಿಗೆ ಕ್ರೂಸ್ ಹಡಗು ಕೊಚ್ಚಿನ್ ಬಂದರಿನತ್ತ ತನ್ನ ಪ್ರಯಾಣ ಬೆಳೆಸಿತು.