Connect with us

DAKSHINA KANNADA

ಬೋಳಾರದಲ್ಲಿ ಮಂಗಳವಾರದಿಂದ ವರ್ಷಾವಧಿ ಮಾರಿಪೂಜೆ ಆರಂಭ

Published

on

-ಕದ್ರಿ ನವನೀತ ಶೆಟ್ಟಿ 

ಮಂಗಳೂರು: `ಮಾರಿಯಮ್ಮ’ ಎನ್ನುವ ಶಕ್ತಿದೇವತೆ ಮೂಲದಲ್ಲಿ ಪುರಾಣದ ಶ್ರೀದೇವಿ ದುರ್ಗೆ ಅಲ್ಲ. ಆದರೆ ಆಕೆ ತನ್ನ ಜೀವಿತಾವಧಿಯಲ್ಲಿ ಕಷ್ಟವನ್ನು ಅನುಭವಿಸಿ, ತ್ಯಾಗ, ಬಲಿದಾನ, ಪರಾಕ್ರಮ, ಕರುಣೆ, ಭಕ್ತಿ, ದಾನ ಗುಣಗಳಿಂದ ಮರಣಾನಂತರ ದೈವತ್ವವನ್ನು ಸಿದ್ಧಿಸಿಕೊಳ್ಳುವ ಅಥವಾ ಅವಾಹಿಸಿಕೊಳ್ಳುವ ಆರಾಧನಾ ಸ್ವರೂಪವೇ ಜನಪದರ ಮಾರಿಯಮ್ಮ.

ಈ ಮಾರಿಯಮ್ಮನೂ ದುರ್ಗೆಯಂತೆ ತನ್ನ ವೈರಿನಾಶ ಮಾಡಿದ್ದಾಳೆ ಎನ್ನುವ ಘಟನಾವಳಿಗಳ ಮೆಲುಕು ಹಾಕುವ ಕಾರ್ಯಕ್ರಮವೇ ಮಾರಿಜಾತ್ರೆಯ ವಿವಿಧ ಆಚರಣೆಗಳು.

ಮಾರಿಯಮ್ಮನಿಗೆ ತಾನು ಹಡೆದ ಮಕ್ಕಳಿದ್ದರೂ ಆ ಮಕ್ಕಳನ್ನು ಆಕೆಯೇ ಕೊಲ್ಲುತ್ತಾಳೆ! ಆ ಮಕ್ಕಳೂ ಸತ್ತ ಮೇಲೂ ದೈವತ್ವಕ್ಕೆ ಏರದೆ `ಕೋರ-ಕೋಟ್ಲೆ’ ಎಂಬ ಮಾರಕ ರೋಗಗಳಾಗಿರುತ್ತಾರೆ.

ಆ ರೋಗನಿವಾರಕ ಶಕ್ತಿ ಇರುವಾಕೆ ಮಾರಿಯಮ್ಮ. ಮಾರಿಯಮ್ಮ ದೇವತೆ ಆದ ಮೇಲೆ ಭಕ್ತರನ್ನೇ ತನ್ನ ಮಕ್ಕಳಂತೆ ತಿಳಿದು ಭಕ್ತರೆಲ್ಲರಿಗೂ `ಅಮ್ಮ’ನಾಗಿ ಇರುವ ಇಷ್ಟಾರ್ಥ ಸಿದ್ಧಿ ಪ್ರಾಪ್ತಿಸಿ ಕೊಡಬಲ್ಲವಳಾಗಿರುತ್ತಾಳೆ.

ಗ್ರಾಮದೇವತೆ, ಮಾತೃದೇವತೆ ಮಾರಿಯಮ್ಮನ ಆರಾಧನೆ ಹೊರಪ್ರದೇಶದಿಂದ ತುಳುನಾಡಿಗೆ ಬಂದ ಸಂಸ್ಕೃತಿಯಾಗಿದೆ. ಆಕೆ ಹೊರ ಜಿಲ್ಲೆಗಳಿಂದ ಬಂದ ದೇವಿಯಾದರೂ ತುಳುವರ ದೈವಗಳ, ದೇವ ದೇವತೆಗಳ ಜೊತೆಯಲ್ಲಿ ಆಕೆಯೂ ಯೋಗ್ಯ ಸ್ಥಾನವನ್ನು ಪಡೆದು ಪೂಜಾರ್ಹಳಾಗಿ ಅನೇಕ ಜಾತಿಗಳ ಪ್ರಧಾನ ಆರಾಧಕ ಶಕ್ತಿಯಾಗಿ ಮೆರೆಯುತ್ತಿದ್ದಾಳೆ.


ಮಾರಿಯಮ್ಮನ ಕತೆಗಳು
ಮಾರಮ್ಮ, ಮಾರಿಕಾಂಬೆ, ಎಲ್ಲಮ್ಮ, ರೇಣುಕಾಂಬೆ, ದುಗ್ಗಮ್ಮ, ಕರಿಯಮ್ಮ, ಮಾಂಕಾಳಮ್ಮ… ಮೊದಲಾದ ನೂರಾರು ಹೆಸರುಗಳಿಂದ ಆರಾಧಿಸಲ್ಪಡುವ ಶಕ್ತಿದೇವತೆ `ಮಾರಿ’ಯ ಬಗ್ಗೆ ಪೌರಾಣಿಕ, ಜಾನಪದ, ಚಾರಿತ್ರಿಕೆ ಕತೆಗಳು ಹಲವು ಇವೆ.

“ಉಚ್ಛ ಕುಲದ ಹೆಣ್ಣು ಹೀನ ಕುಲದವನನ್ನು ಅರಿಯದೆ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾಳೆ. ಮುಂದೆ ಗಂಡನ ಕುಲದ ಹುಟ್ಟು ತಿಳಿದಾಗ ಕೋಪಗೊಂಡು ಗಂಡ, ಮಕ್ಕಳು, ಅತ್ತೆಯನ್ನು ಕೊಂದು ತಾನೂ ಆತ್ಮಾಹುತಿಗೈಯುತ್ತಾಳೆ. ದೈವಿಕ ಶಕ್ತಿಯಾಗುತ್ತಾಳೆ, ಶಕ್ತಿದೇವತೆಯಾಗುತ್ತಾಳೆ.

ಕೋಣ, ಕುರಿ, ಆಡು, ಹಂದಿ, ಕೋಳಿ ಬಲಿ ತೆಗೆದುಕೊಳ್ಳುವ ಮೂಲಕ ಸೇಡು ತೀರಿಸಿಕೊಳ್ಳುತ್ತಾಳೆ. ಆಕೆಗೆ ವೈಧವ್ಯ ಪ್ರಾಪ್ತವಾಗುವುದು, ಮರುಮದುವೆಗೆ ಶೃಂಗಾರ ಮಾಡಿಕೊಳ್ಳುವುದು, ಮತ್ತೆ ವೈಧವ್ಯ ಸ್ಥಿರವಾಗುವುದು ಹೀಗೆ ಆಕೆಯ ಜೀವನಕಥನದ ಚಿತ್ರಣವನ್ನು ಮಾರಿಜಾತ್ರೆಯ ಸಂದರ್ಭದಲ್ಲಿ ಬೊಂಬೆ ನಿರ್ಮಿಸಿ ನಡೆಸುವ ಮಾರಿಪೂಜೆಯ ವಿಧಿ ವಿಧಾನಗಳಲ್ಲಿ ನೆನಪಿಸಿಕೊಳ್ಳಬಹುದು.

ದಂಡಿನ ಮಾರಮ್ಮ
ರಾಜ ಮಹಾರಾಜರ ಕಾಲದಲ್ಲಿ ಯುದ್ಧ ಸಾಮಾನ್ಯವಾಗಿತ್ತು. ಯುದ್ಧದಲ್ಲಿ ಶತ್ರುದಮನ ಪ್ರಧಾನ ಅಂಶ. ರಣಕಣದಲ್ಲಿ ಶತ್ರುವಿನ ಪ್ರಾಣಹರಣ ಮಾಡುವುದು ಸ್ವಾಮಿಕಾರ್ಯ, ದೇವಕಾರ್ಯ ಎಂಬ ನಂಬಿಕೆ. ಶತ್ರುವನ್ನು ಬಲಿದೇವತೆಗೆ ಬಲಿ ನೀಡಿ ಸಂತೃಪ್ತಿಗೊಳಸಿದರೆ ವಿಜಯಪ್ರಾಪ್ತಿ ಎನ್ನುವ ಬಲವಾದ ನಂಬಿಕೆಯಿAದ ಯುದ್ಧರಂಗದಲ್ಲಿ ಅಮಿತೋಲ್ಲಾಸದಿಂದ ಸೈನಿಕರು ವಿಜೃಂಭಿಸುತ್ತಿದ್ದರು.

ದೇವಿಯನ್ನು ಸ್ತುತಿಸಿ ಯುದ್ಧಕ್ಕೆ ಹೊರಟು ಶತ್ರು ಸಂಹಾರ ಮಾಡಿ ವಿಜಯ ಪ್ರಾಪ್ತಿಯ ನೆನಪಿಗೆ ಅಮ್ಮನೆಂದು ಗುಡಿ ಕಟ್ಟಿ ಆರಾಧಿಸುವ ಪರಂಪರೆಯೇ ದಂಡಿನ ಮಾರಮ್ಮ ಮಾರಿಯಮ್ಮ ದೇವಿಯಾದ ಕತೆ.

ಬೋಳಾರದ ಮಾರಿಯಮ್ಮ ಮತ್ತು ಮಂಗಳಾದೇವಿ

ಈ ಎರಡೂ ಚಾರಿತ್ರಿಕ ಕ್ಷೇತ್ರಗಳು ಬೋಳಾರದಲ್ಲಿದೆ. ಈ ದೇವಿಯರ ಬಗ್ಗೆ ಇರುವ ನಂಬಿಕೆಗಳು ಹೀಗಿವೆ.
೧. ಮಂಗಳಾದೇವಿ ಅಕ್ಕ – ಮಾರಿಯಮ್ಮ ತಂಗಿ
೨. ಮಾರಿಯಮ್ಮ ಅಕ್ಕ – ಮಂಗಳಾದೇವಿ ತಂಗಿ
೩. ಮಂಗಳಾದೇವಿ ದೇವಸ್ಥಾನಕ್ಕೆ ಮೊದಲು ಹೋಗಬೇಕು. ನಂತರ ಮಾರಿಗುಡಿಗೆ ಹೋಗಬೇಕು.
೪. ಮೊದಲು ಮಾರಿಗುಡಿಗೆ ಹೋದರೆ ನಂತರ ಮಂಗಳಾದೇವಿಗೆ ಹೋಗಕೂಡದು.
೫. ಮಂಗಳಾದೇವಿಯ ಪ್ರಸಾದ ಹಿಡಿದುಕೊಂಡು ಮಾರಿಗುಡಿಗೆ ಹೋಗಬಹುದು.
೬. ಮಾರಿಗುಡಿಯ ಪ್ರಸಾದ ಹಿಡಿದುಕೊಂಡು ಮಂಗಳಾದೇವಿಗೆ ಬರಬಾರದು.
೭. ನವರಾತ್ರಿ ಕಳೆದು ಏಕಾದಶಿಯಂದು ಶ್ರೀ ಮಂಗಳಾದೇವಿಯು ಅವಭೃತಕ್ಕೆ ಉಪ್ಪಿನಕೋಟೆಗೆ ಬಂದು ಹಿಂದೆ ಬರುವಾಗ ಮಾರಿಗುಡಿಯ ಬಳಿ ಇರುವ ಅಶ್ವತ್ಥ ಕಟ್ಟೆಯ ಬಳಿ ರಥದ ಚಕ್ರಗಳಿಗೆ ನೀರು ಹಾಕಿ ಹಣ್ಣುಕಾಯಿ ನೀಡಿ ಆರತಿ ಸೇವೆ ಮಾಡಲಾಗುವುದು. ಮಾರಿಗುಡಿಯ ಅರ್ಚಕರು ಹಾಗೂ ಮೊಕ್ತೇಸರರು ಈ ಸಂದರ್ಭದಲ್ಲಿ ಉಪಸ್ಥಿತರಿರಬೇಕು.

ಜನ್ನನ `ಯಶೋಧರ ಚರಿತೆ’ಯಲ್ಲಿ `ಮಾರಿ ಪೂಜೆ’

`ಕವಿಚಕ್ರವರ್ತಿ’ ಬಿರುದಾಂಕಿತ ಮಹಾಕವಿ ಜನ್ನನು ಕರ್ನಾಟಕದ ಹಳೆಗನ್ನಡ ಕವಿ (೧೧೪೦-೧೨೬೦). ೧೨೦೯ರಲ್ಲಿ ಆತ ರಚಿಸಿದ ‘ಯಶೋಧರ ಚರಿತೆ’ಯಲ್ಲಿ ಮಾರಿ ಆರಾಧನೆಯ ಸ್ವರೂಪ ಚಿತ್ರಣ ಇದೆ.
ಜನ್ನ ಕವಿಯು ವರ್ಣಿಸಿದ ಮಾರಿಯ ಜಾತ್ರೆಯ ವರ್ಣನೆಯಲ್ಲಿ ಈ ಕೆಳಗಿನ ಆಚರಣೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
೧. ಪ್ರಾಣಿಬಲಿ – ನರಬಲಿ
೨. ಸಿಡಿ ಹರಕೆ
೩. ಕೆಂಡ ಹಾಯುವಿಕೆ
೪. ಮಾಂಸ ಕೊಚ್ಚುವಿಕೆ
೫. ಕತ್ತಿಯಿಂದ ಚುಚ್ಚಿಕೊಳ್ಳುವಿಕೆ
೬. ರುಂಡಗಳನ್ನು ಅಂಟಿಸಿದ ಅಲಂಕಾರ
ಇದು ಸುಮಾರು ೮೦೦ ವರ್ಷಗಳ ಹಿಂದೆ ಬರೆದ ಕಾವ್ಯ. ಮಾರಿದೇವಿಯ ಆರಾಧನಾ ಸ್ವರೂಪದಲ್ಲಿ ಅಂದೇ ಬದಲಾವಣೆಗಳಾಗಿತ್ತು. ಮುಂದಿನ ೮೦೦ ವರ್ಷ ಗಳಲ್ಲೂ ಹಂತ ಹಂತವಾಗಿ ಬದಲಾವಣೆಯನ್ನು ಕಾಣುತ್ತಲೆ ಮುಂದುವರಿಯುತ್ತಿದೆ.

ರಾಶಿಪೂಜೆ – ಮಾರಿಪೂಜೆ

ಬೋಳಾರ ಮಾರಿಗುಡಿಯಲ್ಲಿ `ದರ್ಶನ ಸೇವೆ’ ಪಾತ್ರಿಗಳಿಲ್ಲದೆ ನಿಲುಗಡೆಯಾಗಿ ಐದಾರು ದಶಕಗಳು ಸಂದಿವೆ.2004ರ ಕ್ಷೇತ್ರ ನವೀಕರಣ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ನಂತರ ಉರ್ವ ಮಾರಿಗುಡಿಯ ಮಾದರಿಯಲ್ಲಿ ರಾಶಿಪೂಜೆ – ಮಾರಿಪೂಜೆಯನ್ನು ನಡೆಸಲಾಗುತ್ತದೆ. ಉರ್ವ ಕ್ಷೇತ್ರದ ತೆಲುಗು ಕುಂಬಾರ ಸಮುದಾಯದ ಅರ್ಚಕ ವೃಂದದವರು ಬೋಳಾರದ `ರಾಶಿಪೂಜೆ – ಮಾರಿಪೂಜೆ’ಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ.

`ರಾಶಿ ಪೂಜೆ’ ಎಂದರೆ `ನೈವೇದ್ಯದ ರಾಶಿ’ಗೆ ಮಾಡುವ ಪೂಜೆ

ಕುಚ್ಚಲು ಅಕ್ಕಿಯ (೪.೫ ಮುಡಿ) ಅನ್ನ, ಬೆಳ್ತಿಗೆ ಅಕ್ಕಯ (ಅರ್ಧ ಮುಡಿ) ದೋಸೆ, ೫ ಗೋಣಿ ಹರಳು, ೮ ತೆಂಗಿನಕಾಯಿ, ೮ ಪನ್ನೆ ಬಾಳೆಹಣ್ಣು, ಅಡಿಕೆ, ವೀಳ್ಯದೆಲೆ, ಲಿಂಬೆಹುಳಿ, ಜೇನುತುಪ್ಪ ಮೊದಲಾದ ವಸ್ತುಗಳನ್ನು ನೈವೇದ್ಯದ ರಾಶಿಯಲ್ಲಿರಿಸಲಾಗುತ್ತದೆ.

ರಾಶಿ ಮೆರವಣಿಗೆ

ನೈವೇದ್ಯವನ್ನು ರಾಶಿ ಪೂಜೆಯ ಪಾಕಶಾಲೆಯಿಂದ ತರುವ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ರಾಶಿಬಲಿ, ನೈವೇದ್ಯ ಬಲಿ ಎನ್ನುತ್ತಾರೆ. ಉರ್ವ ಮಾರಿಗುಡಿಯಲ್ಲಿ ಈ ವಿಧಿಗಳನ್ನು ನಡೆಸುವವರು ತೆಲುಗು ಕುಂಬಾರ ಮಾರಿಯಮ್ಮ ಅರ್ಚಕ/ಪಾತ್ರಿ ಕುಟುಂಬದ ಹಿರಿಯ ಸ್ತ್ರೀಯರು. ಐವರು ಮುತ್ತೈದೆಯರು ಸ್ನಾನ ಮಾಡಿ, ಬಿಳಿ ಸೀರೆ ಉಟ್ಟು, ಹೂ ಮುಡಿದು, ಮಡಿಲು ತುಂಬಿಸುವುದು.

4 ಸಣ್ಣ ಬುಟ್ಟಿಗಳಲ್ಲಿ ಅನ್ನ ತುಂಬಿ ಅವರ ತಲೆಗೆ ಇರಿಸಲಾಗುತ್ತದೆ. 5ನೇ ಬುಟ್ಟಿಯಲ್ಲಿ ಕುಚ್ಚಲು ಅಕ್ಕಿಯಲ್ಲಿ ಮಾಡಿದ `ಪಲ್ಲೆ’ ಇಟ್ಟು ನಂತರ ಐದೂ ಬುಟ್ಟಿಗಳನ್ನು ಮುಚ್ಚುವಂತೆ ಮೇಲಿನಿಂದ ಬಿಳಿ ಬಟ್ಟೆಯನ್ನು ಹಾಕುವುದು. ಆಗ ಅವರೆಲ್ಲರೂ ಸಾಲಾಗಿ ಒಬ್ಬರ ಹಿಂದೆ ಒಬ್ಬರು ನಿಂತಿರುತ್ತಾರೆ.

ನಂತರ ಮಡಿವಾಳ ಹಾಸಿದ ಬಟ್ಟೆಯಲ್ಲಿ ನಡೆದುಕೊಂಡು (ನಡೆಮುಡಿ) ಬರುವುದು. ಪೂರ್ವ ಬದಿಯ ಬಾಗಿಲಿನ ಬಳಿ ನಿಲ್ಲುವಾಗ ಮದ್ದು ಸುಡುವಿಕೆ. ನಂತರ ಬಟ್ಟೆಯ ಮೇಲೆ ನಡೆಯುತ್ತಾ ಅಂಗಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಬಂದು ರಾಶಿಕಟ್ಟೆಯ ಬಳಿ ಬರುವುದು.

ರಾಶಿಕಟ್ಟೆಯಲ್ಲಿ ಎರಡು ವಿಭಾಗಗಳು ಇರುತ್ತವೆ. ರಾಶಿಕಲ್ಲಿಗೆ ತುದಿ ಬಾಳೆ ಎಲೆಗಳನ್ನು ಹರಡಿ ಮಹಿಳೆಯರು ಹೊತ್ತು ತಂದ ಅನ್ನವನ್ನು ಅದರ ಒಂದು ಭಾಗಕ್ಕೆ ಹಾಕುವುದು. ಐದನೆಯ ಪಲ್ಲೆ ಮತ್ತು ದೀಪ ಇರುವ ಬುಟ್ಟಿಯನ್ನು ಮಂಡಲ ಹಾಕಿದ ಸ್ಥಳದಲ್ಲಿಡುವುದು. ಒಂದು ಪಲ್ಲೆ ಇಟ್ಟು, ಅದರಲ್ಲೇ ಒಂದು ದೀಪವಿಟ್ಟು ಎಣ್ಣೆ ಹಾಕಿ ಉರಿಸುವುದು. ನಾಲ್ಕು ದಿಕ್ಕುಗಳಲ್ಲಿ ಕಲಶ ತೂರಿ ಇಟ್ಟು ಅದರೊಳಗೆ ಲಿಂಬೆಹಣ್ಣು ಕೊಯ್ದು ಇರಿಸುವುದು.

ಪ್ರತಿಯೊಂದು ಕಲಶಕ್ಕೆ ಐದೈದು ವೀಳ್ಯದೆಲೆ ಇಟ್ಟು ಅದರ ಮೇಲೆ ಒಂದೊಂದು ಚೆಂಡು ಹೂವನ್ನು ತೂರಿಗಳ ಮೇಲಿಡುವುದು. ನಾಲ್ಕು ಕಲಶ ತೂರಿಗೂ ಕೆಳಗಡೆ ಒಂದೊಂದರಂತೆ ಇಡುವುದು. ಬಳಿಕ ನಾಲ್ಕು ಕಲಶ ತೂರಿಗಳ ಮೇಲೆ ಪ್ರತ್ಯೇಕ ಪ್ರತ್ಯೇಕವಾಗಿ ಅಡಿಕೆ ಮತ್ತು ವೀಳ್ಯದೆಲೆ ಇಡುವುದು. ನಾಲ್ಕು ಕಲಶಗಳಿಗೂ ನಾಲ್ಕು ಹಣ್ಣುಕಾಯಿ ಮಾಡಿಡುವುದು.

4 ಬುಟ್ಟಿಗಳ ನೈವೇದ್ಯ ಸಮರ್ಪಣೆಯ ಬಳಿಕ ಒಟ್ಟು4.5 ಮುಡಿ ಕುಚ್ಚಲಕ್ಕಿಯ ಅನ್ನ ನೈವೇದ್ಯವನ್ನು ದೇವಿಪೂಜೆಯನ್ನು ನಿರ್ವಹಿಸುತ್ತಿರುವ ಅರ್ಚಕರ ಸಂಬಂಧಿಗಳು ಪಾಕಶಾಲೆಯಿಂದ ತಂದು ರಾಶಿಕಲ್ಲಿಗೆ ಬಡಿಸುವರು.

ರಾಶಿ ಕಟ್ಟೆಯ ಒಂದು ಭಾಗದಲ್ಲಿ ಅನ್ನದ ನೈವೇದ್ಯ ಬಡಿಸಿದರೆ ಇನ್ನೊಂದು ಭಾಗಕ್ಕೆ ೫ ಗೋಣಿಚೀಲ ಹರಳು (ಪೊರಿ) ರಾಶಿ ಬಡಿಸುವರು. ಅರ್ಧ ಮುಡಿ ಅಕ್ಕಿಯಿಂದ ತಯಾರಿಸಿದ ದೋಸೆಯನ್ನು ಎರಡೂ ರಾಶಿಗಳ ಮೇಲೆ ಇರಿಸುವರು. ಕರಿಬಳೆ, ಹಿಂಗಾರ, ಮಲ್ಲಿಗೆ, ಅಬ್ಬಲಿಗೆ ಇತ್ಯಾದಿ ಹೂವುಗಳಿಂದ ರಾಶಿಕಟ್ಟೆಯನ್ನು ಅಲಂಕರಿಸುವರು.

ರಾಶಿಪೂಜೆ

ಎಲ್ಲವನ್ನೂ ಬಡಿಸಿ, ಶೃಂಗರಿಸಿ ದೂಪ ದೀಪಾದಿಗಳಿಂದ ಪ್ರಾರ್ಥನೆ, ಪೂಜೆ ನೆರವೇರುವುದು. (ಊರಿಗೆ ಬರುವ ಮಾರಿ ರೋಗಗಳಿದ್ದರೆ ಅವುಗಳನ್ನು ಪರಿಹರಿಸು, ಸಮೃದ್ಧಿಯನ್ನು ಕರುಣಿಸು, ರಾಶಿ ನೈವೇದ್ಯವನ್ನು ಸಂತೋಷದಿAದ ಸ್ವೀಕರಿಸಬೇಕೆಂದು ಭಕ್ತರ ಪರವಾಗಿ ಪ್ರಾರ್ಥನೆಯನ್ನು ಅರ್ಚಕರು, ಆಡಳಿತ ಮೊಕ್ತೇಸರರು ಮಾಡುತ್ತಾರೆ.)

ಮಾರಿ ಓಡಿಸುವುದು
ಮಾರಿದೇವತೆಯ ಗಣಗಳನ್ನು ಸಂತೃಪ್ತಿಪಡಿಸುವ ಜಾನಪದ ಆರಾಧನಾ ಪದ್ಧತಿ `ಮಾರಿ ಉಚ್ಚಿಷ್ಠ’ ಅಥವಾ ಮಾರಿ ಓಡಿಸುವ ಪದ್ಧತಿ. ರಾಶಿಪೂಜೆಯ ನಂತರ ನಡುರಾತ್ರಿ ಕಳೆದ ಮೇಲೆ, ಜನಸಂಚಾರ ಇಲ್ಲದೆ ಇರುವ ಸಮಯದಲ್ಲಿ ಅಂದರೆ ರಾತ್ರಿ ೩-೩೦ರಿಂದ ೩.೫೦ರ ಅವಧಿಯಲ್ಲಿ ನಡೆಯುತ್ತದೆ.

ಮಾರಿ ಓಡಿಸುವಾಗ ಜನರು ಎದುರು ಬದಿಯಿಂದ ಕಾಣಸಿಗಬಾರದು. ಎದುರಾದವರಿಗೂ ಆಪತ್ತು ಬರುತ್ತದೆ. ಈ ಮಾರಿ ಉಚ್ಚಿಷ್ಠದಿಂದಾಗಿ ಮಾರಿದೇವಿಯ ಗಣಗಳು ಸಂತೃಪ್ತಿ ಹೊಂದಿ ಊರಿನಲ್ಲಿ ಹರಡಿರುವ ರೋಗ, ರುಜಿನಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ರಾಶಿಪೂಜೆಯ ಪ್ರಸಾದ
ಭಕ್ತರು ಈ ರಾಶಿಯ ನೈವೇದ್ಯ ಪ್ರಸಾದ ಸ್ವೀಕರಿಸಿ ಸಂಗ್ರಹಿಸಿ ಇಡುವರು (ಅನ್ನ ಮತ್ತು ದೋಸೆ).
ಸಾಮಾನ್ಯ ಕಾಯಿಲೆಗಳು ಬಂದಾಗಲೂ, ಕೋರ, ಕೋಟಲೆ, ಮೈಲಿಗೆ ರೋಗ, ಸಾಮಾನ್ಯ ಕಾಯಿಲೆಗಳು ಬಂದಾಗಲೂ (ಉದಾ: ಜ್ವರ ಇತ್ಯಾದಿ) ಈ ನೈವೇದ್ಯವನ್ನು ಬೇಯಿಸಿ ಗಂಜಿ ಮಾಡಿ ಕುಡಿದರೆ ಅಂಟುಜಾಡ್ಯಗಳು ಶೀಘ್ರ ಉಪಶಮನವಾಗುವುದೆಂಬ ನಂಬಿಕೆ ಭಕ್ತರಿಗಿದೆ.

ಈ ಪ್ರಸಾದವನ್ನು ಶುದ್ಧಾಚಾರದಲ್ಲಿ ಸೇವಿಸಬೇಕಾಗುತ್ತದೆ. ಅದನ್ನು ಶುದ್ಧವಾದ ಸ್ಥಳದಲ್ಲಿ ಜಾಗ್ರತೆಯಿಂದ ಇರಿಸುತ್ತಾರೆ. ಇದು ದೇವಿಯ ಮಹಾಪ್ರಸಾದ ಎಂದು ಮುಂದಿನ ವಾರ್ಷಿಕ ಮಹಾಪೂಜೆಯ ತನಕ ಜಾಗ್ರತೆಯಿಂದಿರಿಸಿಕೊಳ್ಳುತ್ತಾರೆ.

ಬೋಳಾರ ಹಳೇಕೋಟೆ ಮಾರಿಯಮ್ಮ
ನೇತ್ರಾವತಿ ಹಾಗೂ ಫಲ್ಗುಣಿ ನದಿಗಳು ಒಂದಾಗಿ ಮುಂದೆ ಸಮುದ್ರ ಸೇರುವ ಸ್ಥಳಕ್ಕೆ `ಅಳುವೆ’ ಎಂದು ಹೆಸರು. ಚಂದ್ರಶೇಖರ ಬಂಗರಾಜನು ಮಂಗಳೂರು ಅಳುವೆಯ ಎದುರುಗಡೆಯಲ್ಲಿ ಒಂದು ಬಲವಾದ ಕೋಟೆಯನ್ನು ಕಟ್ಟಿಸಬೇಕೆಂದು ಆಲೋಚನೆ ಮಾಡಿ ಮಂಗಳಾದೇವಿ ದೇವಸ್ಥಾನದ ಹತ್ತಿರ ಕ್ರಿ.ಶ. 1222ರಲ್ಲಿ ಕೋಟೆಯನ್ನು ಕಟ್ಟಿಸಿ ಮಂದಿ ಮಕ್ಕಳನ್ನು (ಸೈನ್ಯವನ್ನು) ಇಟ್ಟು ಅದರ ಮಧ್ಯದಲ್ಲಿ ಮಂಗಳಾದೇವಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ ಉಂಬಳಿ ಬಿಟ್ಟನು. ಆ ಅಳುವೆಯು ಈಗ ಇರುವ ಸ್ಥಳದಲ್ಲಿಯೇ ಇತ್ತೆಂದು ಹೇಳಬಹುದು.

ಬೋಳಾರ ಹೊಸಕೋಟೆ – ಶಿವರಾಜೇಂದ್ರ ಗಿರಿ
ಇಕ್ಕೇರಿ ಅರಸ ಇಮ್ಮಡಿ ಬಸವಪ್ಪನಾಯಕ (ಕ್ರಿ.ಶ. ೧೭೪೦-೧೭೫೫). ಇವನು ವೀರಭದ್ರ ನಾಯಕನ ಮಗನು. ಇವನು ಮಂಗಳೂರಿನ ಹಳೇಕೋಟೆಯನ್ನು ಮುರಿದು ಶಿವರಾಜೇಂದ್ರಗಿರಿ ಎಂಬ ಹೊಸ ಕೋಟೆಯನ್ನು ಕಟ್ಟಿಸಿದನು (೧೭೪೩).

ಮಲ್ಪೆಯ ಹರಿಯಾಬಾದಿನಗಡ ಕೋಟೆ, ಕಾಪುವಿನ ಮನೋಹರಗಡ ಕೋಟೆ, ಕುಂದಾಪುರ ಕೋಟೆಯನ್ನೂ ಕಟ್ಟಿಸಿದ್ದನು. ಮಲ್ಲಾರು ಹಾಗೂ ತೋನ್ಸೆಯಲ್ಲೂ ಒಂದೊಂದು ಕೋಟೆ ಕಟ್ಟಿಸಿದನು. ಇದೇ ಸಂದರ್ಭದಲ್ಲಿ ಮಂಗಳೂರಿನ ಹಳೆಕೋಟೆಯನ್ನು ಮುರಿದು ‘ಶಿವರಾಜೇಂದ್ರ ಗಿರಿ’ ಎಂಬ ಹೊಸ ಕೋಟೆಯನ್ನೂ ಕಟ್ಟಿಸಿದನು.

ಕೆಳದಿ (ಇಕ್ಕೇರಿ) ರಾಜ ವೀರಭದ್ರ ನಾಯಕನ ಮಗನಾದ ೨ನೇ ಬಸವಪ್ಪನು (ಕ್ರಿ.ಶ. ೧೭೩೯-೧೭೫೪) ಮಲ್ಪೆ, ಕಾಪು, ಕಲ್ಯಾಣಪುರ ಹಾಗೂ ಮಂಗಳೂರಿನಲ್ಲಿ ಕೋಟೆಗಳನ್ನು ಕಟ್ಟಿಸಿದ ಎಂದು ‘ಕೆಳದಿ ನೃಪವಿಜಯ’ ಕೃತಿಯಲ್ಲಿದೆ.

ಇಂದ್ರ ವಿಭವನಿಭ ವಿಭವ ನ
ರೇಂದ್ರ ತಾಂ ಮಂಗಲೂರ ತಾಣದೆ ಶಿವರಾ |
ಜೇಂದ್ರಗಿರಿಯೆಂಬ ಗಡಮಂ
ಸಾದ್ರಯಶಂ ರಚನೆಗೆಯ್ಸಿದಂ ಪೊಸ ಬಗೆಯಂ ||
ಎಂಟುನೂರು ವರ್ಷಗಳ ಹಿಂದೆಯೇ `ಮಾರಿಗುಡಿ’ ಬೋಳಾರದ ಹಳೇಕೋಟೆ ಪ್ರದೇಶದಲ್ಲಿ ಇತ್ತು ಎನ್ನುವುದನ್ನು ಚಾರಿತ್ರಿಕ ದಾಖಲೆಗಳಿಂದ ತಿಳಿದುಕೊಳ್ಳಬಹುದು.

ಪಾಡ್ದನ ಸಾಹಿತ್ಯದಲ್ಲಿ ಬೋಳಾರದ ಮಾರಿಯಮ್ಮ
– ಅತ್ತಾವರದ ವೈದ್ಯನಾಥನ ಪಾರ್ದನ
– ಉಳ್ಳಾಲ ಉಳಿಯ ಉಳ್ಳಾಲ್ತಿ ಧರ್ಮರಸರ ಪಾಡ್ದನ

ಭೈರರ ಮಾರಿಯಮ್ಮ ನಂಬಿಕೆಗಳು
೧. ಭೈರ ಜನಾಂಗದವರ ನಂಬಿಕೆಯAತೆ ಬೋಳಾರ ಮಾರಿಯಮ್ಮ ಅಕ್ಕ. ಕಟೀಲು, ಕೊಲ್ಲೂರು, ಮೈಸೂರು, ಕೊಳ್ಳೇಗಾಲ ಮೊದಲಾದ ಇತರ ಹನ್ನೊಂದು ಕ್ಷೇತ್ರಗಳಲ್ಲಿರುವ ದೇವಿಯರು ಮಾರಿಯಮ್ಮನ ತಂಗಿಯಂದಿರು.
೨. ಭೈರರ ಕೇರಿಗಳಿರುವ ಊರಿನಲ್ಲಿ ಮಾರಿಜಾತ್ರೆ (ಪೂಜೆ) ಮಾಡಿದರೆ ಅಕ್ಕ ಬೋಳಾರ ಮಾರಿಯಮ್ಮ ಸಂತುಷ್ಟಿಗೊಳ್ಳುವಳು.
೩. ಬೋಳಾರ ಮಾರಿಯಮ್ಮನಿಗೂ ಉಳಿದ ೧೧ ಕ್ಷೇತ್ರಗಳಲ್ಲಿ ನೆಲೆಸಿದ ದೇವಿಯರಿಗೂ ೧೦೧ ಗಣಗಳೂ ೧೦೧ ದೂತರೂ ಇದ್ದಾರೆ.
೪. ಮಾರಿಗೆ ರಕ್ತ ಬಲಿ ಕೊಡದಿದ್ದರೆ ಸಾಂಕ್ರಾಮಿಕ ರೋಗ ಬರುತ್ತದೆ.

ಬೋಳಾರ ಮಾರಿಯಮ್ಮನ ಪರಿವಾರ
• ಮಾತಂಗಿ, ಮೈರಾಣ, ದೂತ
• ಭಂಡಾರಮನೆಯಲ್ಲಿ ನಾಗಸಾನಿಧ್ಯ, ಎಲ್ಲಮ್ಮ ದೇವಿ, ಅಣ್ಣಪ್ಪ ಪಂಜುರ್ಲಿ, ಗುಳಿಗ
• ಕ್ಷೇತ್ರಪಾಲ ರಾಜಗುಳಿಗ

ಜಲಕದ ಕೆದು – ಗುಜ್ಜರಕೆರೆ
ನವರಾತ್ರಿ ಸಂದರ್ಭದಲ್ಲಿ ಮಾರಿಯಮ್ಮನ ರಥೋತ್ಸವ ಜರಗಿ ಅವಭೃತ ಗುಜ್ಜರಕೆರೆಯಲ್ಲಿ ನಡೆಯುತ್ತಿದ್ದು ಕಾರಣಾಂತರಗಳಿAದ ನಿಲುಗಡೆಯಾಗಿ ನೇತ್ರಾವತಿ ನದಿಯಲ್ಲಿ ಅವಭೃತ ನಡೆಯುತ್ತಿದೆ. ಇದೀಗ ಗುಜ್ಜರಕೆರೆ ನವೀಕರಣಗೊಂಡಿದೆ. ಶೀಘ್ರದಲ್ಲೇ ಗುಜ್ಜರಕೆರೆಯಲ್ಲೇ ಜಲಕದ ಪ್ರಕ್ರಿಯೆಯನ್ನು ನಡೆಸಲು ಸಂಕಲ್ಪಿಸಲಾಗಿದೆ.

ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ
ಬೋಳಾರ, ಮಂಗಳೂರು

ದಿನಾಂಕ 26-೦4-2022 ಮಂಗಳವಾರ ರಾತ್ರಿ 8ರಿಂದ
ವರ್ಷಾವಧಿ ರಾಶಿಪೂಜೆ – ಮಾರಿಪೂಜೆ

ದಿನಾಂಕ 27-4-2022 ಬುಧವಾರ ಸಂಜೆ 6ರಿಂದ
ಅಣ್ಣಪ್ಪ ಪಂಜುರ್ಲಿ ನೇಮ

ದಿನಾಂಕ 28-4-2022 ಗುರುವಾರ ರಾತ್ರಿ 8ರಿಂದ
ಕ್ಷೇತ್ರಪಾಲ ರಾಜಗುಳಿಗ ಕೋಲ

ರಾಶಿಪೂಜೆ- ಮಾರಿಪೂಜೆಯು ಪ್ರಪ್ರಥಮ ವಾರ್ತಾವಾಹಿನಿ ನಮ್ಮ ಕುಡ್ಲದಲ್ಲಿ 26 ,ಎಪ್ರೀಲ್ ಮಂಗಳವಾರ ಸಂಜೆ 7 ರಿಂದ ನೇರಪ್ರಸಾರವಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಅಶೋಕ್ ಕುಮಾರ್ ತಿಳಿಸಿದ್ದಾರೆ.

ಕದ್ರಿ ನವನೀತ ಶೆಟ್ಟಿ

DAKSHINA KANNADA

ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!

Published

on

ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ‌ಮಾಹಿತಿ ನೀಡಿದ್ದಾರೆ.

ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Continue Reading

DAKSHINA KANNADA

ನ.30ರಂದು ಶ್ರೀ ಆದಿ ಕ್ಷೇತ್ರ ಜಾರದಲ್ಲಿ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ

Published

on

ಮಂಗಳೂರು: ಧಾರ್ಮಿಕ ಕ್ಷೇತ್ರ ಜಾರದಲ್ಲಿ ನ. 30ರಂದು ಬೆಳಿಗ್ಗೆ 8 ಗಂಟೆಯಿಂದ ಜಾರಂದಾಯ ಬಂಟ ಪರಿವಾರ ಸಾನಿಧ್ಯ ಮತ್ತು ಕ್ಷೇತ್ರ ಕಲ್ಲುರ್ಟಿ ಸಾನಿಧ್ಯಗಳ ನಿಧಿ ಕುಂಭ ಮತ್ತು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ ಎಂದು ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಖ್ಯಾತ ವಾಸ್ತು ತಜ್ಞಮಹೇಶ್ ಮುನಿಯಂಗಳ ಇವರ ವಾಸ್ತು ವಿನ್ಯಾಸದೊಂದಿಗೆ ಸುಮಾರು 12 ರಿಂದ 15 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಕ್ಷೇತ್ರ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ನವೆಂಬರ್ 11ರಂದು ಜಾರಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ  ಬಂಟ ಮಾಯಾಂದಾಲ್ ದೈವಗಳ ನೇಮೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ನವೆಂಬರ್ 30ರಂದು
ಬೆಳಿಗ್ಗೆ 9.00 ಗಂಟೆಗೆ ಸರಳ ಜುಮಾದಿ ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ 11.00 ಗಂಟೆಗೆ ಶ್ರೀ ಜಾರ ಆದಿ ಕ್ಷೇತ್ರದ ಗಿರಿಯಲ್ಲಿ ಗ್ರಾಮ ದೈವ ಶ್ರೀ ಬಂಟ ಸರಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ನಿಧಿ ಕುಂಬ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ  ಭಕ್ತಾಧಿಗಳು ತನು ಮನ ಧನಗಳಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಬಳಿಕ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯ ಅವರು, “ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯ ಪ್ರಧಾನ ದೈವಗಳಾಗಿ ಶ್ರೀ ಉಳ್ಳಾಯ, ಶ್ರೀ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಾಂದಾಲ್ ದೈವ, ಪಿಲಿ ಚಾಮುಂಡಿ, ಬಬ್ಬರ್ಯ ದೈವಗಳು ಕ್ಷೇತ್ರ ಹಾಗೂ ಗ್ರಾಮದ ಮಾಗಣೆಯ ದೈವಗಳಾಗಿವೆ. ಕ್ಷೇತ್ರದ ಆದಿ ದೈವಗಳಾಗಿ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ, ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ” ಎಂದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಶ್ರೀ ಪ್ರಕಾಶ ವಿ. ಹೊಳ್ಳ ಶಕ್ತಿನಗರ, ಕ್ಷೇತ್ರದ ತಂತ್ರಿಗಳಾದ ಕೊಂರ್ಗಿಬೈಲು ನಾರಾಯಣ ಮಯ್ಯರ , ಕ್ಷೇತ್ರದ ಗಡಿ ಪ್ರಧಾನರಾದ ಜತ್ತಿ ಪೂಜಾರಿ ಜಾರ, ಅಧ್ಯಕ್ಷರಾದ ಉದಯಶಂಕರ ಜಾರಮನೆ, ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ಕೋಶಾಧಿಕಾರಿ ಜೀವನ್ ದಾಸ್ ಜಾರ ಮತ್ತಿತರರು ಉಪಸ್ಥಿತರಿದ್ದರು.

Continue Reading

DAKSHINA KANNADA

Mangaluru: ಬೆಳ್ಮ ಬೋಲ್ದನ್‌ ಕುಟುಂಬಿಕರು ತರವಾಡು ಮನೆಯಲ್ಲಿ ಕೋಲೋತ್ಸವ

Published

on

ಮಂಗಳೂರು: ಕೊಣಾಜೆ ಬೆಳ್ಮದಲ್ಲಿರುವ ಬೋಲ್ದನ್‌ ಕುಟುಂಬಿಕರ ತರವಾಡು ಮನೆಯಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ಮೂರನೇ ವರ್ಷದ ಕೋಲೋತ್ಸವ ಭಾನುವಾರ ರಾತ್ರಿ ಸಂಭ್ರಮದಿಂದ ಜರುಗಿತು.

ಭಾನುವಾರ ಬೆಳಿಗ್ಗೆ ಪ್ರಶಾಂತ್ ಉಡುಪ ಪೌರೋಹಿತ್ಯದಲ್ಲಿ ನಾಗತಂಬಿಲ, ಗಣಹೋಮ ನಡೆದ ಬಳಿಕ ಶ್ರೀ ವೆಂಕಟ್ರಮಣ ದೇವರ ಮುಡಿಪು ಕಟ್ಟುವಿಕೆಯಲ್ಲಿ ಸರ್ವ ಕುಟುಂಬಿಕರು ಪಾಲ್ಗೊಂಡು ದೇವತಾ ಕಾರ್ಯದಲ್ಲಿ ಭಾಗವಹಿಸಿದರು. ಮಧ್ಯಾಹ್ನ ಅನ್ನಸಂಪರ್ತಣೆ ನಡೆಯಿತು.

ಅದೇ ದಿನ ರಾತ್ರಿ 7.30ಕ್ಕೆ ದೈವದ ಭಂಡಾರ ಏರಿ ಬಳಿಕ ಕಲ್ಲುರ್ಟಿ , ಪಂಜುರ್ಲಿ, ಗುಳಿಗ ಕೋಲ ಉತ್ಸವ ಜರುಗಿತು. ಮರುದಿನ ಅಗೇಲು ಸೇವೆ ನಡೆಯಿತು.

ತರವಾಡು ಮನೆಯ ಮೋಹಿಣಿ ಬೆಳ್ಮ, ಐತಪ್ಪ ಬೆಳ್ತಂಗಡಿ, ಧರ್ಣಪ್ಪ ಧರ್ಮಸ್ಥಳ, ವಿಶ್ವನಾಥ ಕಡಬ, ದಯಾನಂದ್‌ ಹುಬ್ಬಳ್ಳಿ, ದೇವದಾಸ ಬೆಳ್ಮ, ಆನಂದ ಕಡಬ, ಚಂದ್ರಶೇಖರ ಎಕ್ಕೂರು, ಹರೀಶ ವರ್ಕಾಡಿ ಮೊದಲಾದವರು ಭಾಗವಹಿಸಿದ್ದರು.

ರಾತ್ರಿ ತರವಾಡಿನ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆ ನಡೆದು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆನಂದ ಕಡಬ ಮಂಡಿಸಿದರು.

ಕ್ಷೇತ್ರದ ಅಂಗಣಕ್ಕೆ ಇಂಟರ್‌ಲಾಕ್ ಅಳವಡಿಸಿದ ದಯಾನಂದ ಹುಬ್ಬಳ್ಳಿ, ತರವಾಡು ಮನೆಗೆ ಗ್ರೈಂಡರ್‌ ನೀಡಿದ ಶೋಭಾ ವಾಮಂಜೂರು, ತರವಾಡು ಮನೆಗೆ ಕೊಡುಗೆಯಾಗಿ ನೀಡಿದ ಕುರ್ಚಿಗಳಿಗೆ ಆರ್ಥಿಕ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು.

 

ದಿನಕರ ಕಯ್ಯಾರ, ವಿಕ್ರಾಂತ್‌ ಜಪ್ಪಿನಮೊಗರು , ಧನ್‌ರಾಜ್ ತಲಪಾಡಿ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರೂ ಉಪಸ್ಥಿತರಿದ್ದರು.

Continue Reading

LATEST NEWS

Trending