ಮಂಗಳೂರು : ರಸ್ತೆಯ ಮೇಲೆ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಹೊರವಲಯದ ಹಳೆಯಂಗಡಿಯಲ್ಲಿ ನಡೆದಿದೆ.
ಹಳೆಯಂಗಡಿಯ ಮುಖ್ಯರಸ್ತೆಯಿಂದ ಕೊಳುವೈಲುಗೆ ತೆರಳುವ ರಸ್ತೆಯುದ್ದಕ್ಕೂ ಚಿಮ್ಮಿದ ರಕ್ತದ ಕಲೆಗಳನ್ನು ಗಮನಿಸಿದ ಸ್ಥಳೀಯರು ಆತಂಕದಿಂದ ಸ್ಥಳೀಯ ಪಂಚಾಯತ್ ಸದಸ್ಯರುಗಳ ಗಮನಕ್ಕೆ ತಂದರು.
ಆ ಬಳಿಕ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಉಪಾಧ್ಯಕ್ಷರಾದ ಅಶೋಕ್ ಹಾಗೂ ಇತರ ಸದಸ್ಯರುಗಳು ಘಟನಾ ಸ್ಥಳಕ್ಕೆ ಬಂದು ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದರು.
ಮಾಹಿತಿ ಪಡೆದ ತಕ್ಷಣ ಆಗಮಿಸಿದ ಮುಲ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯಂಗಡಿ ಮುಖ್ಯರಸ್ತೆಯಿಂದ ಹಿಡಿದು ಕೊಳುವೈಲು ರಸ್ತೆಯ ಹಾಲಿನ ಡಿಪೋ ವರೆಗೂ ರಕ್ತ ಚಿಮ್ಮಿದ ಕಲೆಗಳು ಕಂಡುಬಂದಿದ್ದು ರಕ್ತ ಮನುಷ್ಯರದ್ದೊ ಅಥವಾ ಇತರ ಪ್ರಾಣಿಯದ್ದೊ ಎಂದು ವಾಸ್ತವಾಂಶ ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಾಗಿದೆ,
ಮುಲ್ಕಿ ಪೋಲಿಸರು ಇದೀಗ ಸ್ಥಳೀಯ ಅಂಗಡಿಗಳ ಸಿಸಿಟಿವಿಯ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.