ಮಂಗಳೂರು: ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಿಂದ ಒಟ್ಟು 260 ಯಾತ್ರಿಕರು ಹಜ್ ಯಾತ್ರೆ ಕೈಗೊಳ್ಳಲಿದ್ದು, ಕರ್ನಾಟಕ ರಾಜ್ಯ ಹಜ್ ಸಮಿತಿಯು ಮೇ 24ರಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಹಜ್ ಯಾತ್ರೆಗೆ ತೆರಳುವವರಿಗೆ ಅಲ್ಲಿನ ನಿಯಮಗಳು, ವಿದೇಶ ಸಂಚಾರ ಪ್ರಕ್ರಿಯೆಗಳು, ಧಾರ್ಮಿಕ ವಿಧಿಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದರು. ಯೇನೆಪೋಯ ಅಬ್ದುಲ್ ಕುಂಞ ಉದ್ಘಾಟಿಸುವರು.
ತರಬೇತಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಚಾಲನೆ ನೀಡುವರು. ಕರ್ನಾಟಕ ಹಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ರೌಫುದ್ದೀನ್ ಕಚೇರಿವಾಲಾ ಅಧ್ಯಕ್ಷತೆ ವಹಿಸುವರು.
ಶಾಸಕರಾದ ಯು.ಟಿ.ಖಾದರ್, ಡಾ.ವೈ.ಭರತ್ ಶೆಟ್ಟಿ ಭಾಗವಹಿಸುವರು. 2020–21ರಲ್ಲಿ ಕೋವಿಡ್ ಕಾರಣದಿಂದಾಗಿ ವಿದೇಶಿ ಯಾತ್ರಿಕರಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಹಜ್ ಯಾತ್ರೆ ಆರಂಭಗೊಂಡಿರುವುದು ಸಮುದಾಯದಲ್ಲಿ ಸಂತೋಷ ತಂದಿದೆ ಎಂದರು.
ಈ ಬಾರಿ ಹಜ್ ಯಾತ್ರೆಗಾಗಿ ಮಂಗಳೂರಿನಿಂದ ಯಾವುದೇ ವಿಮಾನದ ಸೇವೆ ಇರುವುದಿಲ್ಲ. ಬದಲಾಗಿ ಬೆಂಗಳೂರಿನಿಂದ ಹಜ್ ಯಾತ್ರೆಗೆ ವಿಮಾನ ಸೇವೆ ಸಿಗಲಿದೆ. ಎಲ್ಲಾ ಪ್ರಯಾಣಿಕರು ಬೆಂಗಳೂರಿನಿಂದ ಯಾತ್ರೆ ಆರಂಭಿಸಲಿದ್ದಾರೆ.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹಜ್ ಸಮಿತಿ ಸದಸ್ಯ ಎ.ಬಿ.ಮುಹಮ್ಮದ್ ಹನೀಫ್ ನಿಝಾಮಿ ಇದ್ದರು.