ಬೆಂಗಳೂರು: ಗೋಹತ್ಯೆ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎಲ್ಲ ವಿಧೇಯಕಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ. ಕೋಮು ಸಾಮರಸ್ಯ ಕದಡುವ ಕೆಲಸವನ್ನು ಯಾವುದೇ ಸಮುದಾಯಕ್ಕೆ ಸೇರಿದ ಸಂಘಟನೆಗಳು ಮಾಡಿದರೂ ಅವನ್ನು ನಿಯಂತ್ರಣ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಬಿಲ್ಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡುತ್ತೇವೆ. ಯಾವುದೇ ಸಂಘಟನೆ ಕೋಮು ವಿಷಬೀಜ ಬಿತ್ತುವ ವಿಚಾರ ಹರಡಿದರೆ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಯಾವುದೇ ಸಮುದಾಯಕ್ಕೆ ಸೇರಿದ್ದರೂ ನಿಯಂತ್ರಣ ಮಾಡುವ ಕೆಲಸವನ್ನು ಮಾಡುತ್ತೇವೆ.
ಬಿಜೆಪಿ ಸರ್ಕಾರದಲ್ಲಿ ಕೇಸರೀಕರಣ ಯಾವ ಮಟ್ಟಕ್ಕೆ ಹೋಗಿ ಮುಟ್ಟಿತ್ತು ಎಂದರೆ ಖಾಕಿ ಹಾಕಿಕೊಳ್ಳಬೇಕಾದ ಪೊಲೀಸರು ಕೇಸರಿ ಶಾಲು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದರು ಸಂವಿಧಾನದ ಪ್ರಕಾರ ಅವರು ಇದನ್ನು ಮಾಡಬಹುದಾ? ಹಾಗಾದರೆ ಖಾಕಿ ಯಾಕೆ ಇರಬೇಕು? ಕಾನೂನು ಯಾಕೆ ಇರಬೇಕು ಇವರೆಲ್ಲಾ ಏನು ಆರ್ಎಸ್ಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಅಥವಾ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರಾ ಅದಕ್ಕಾಗಿ ನಿನ್ನೆ ಸಭೆಯಲ್ಲಿ ನಮ್ಮ ಡಿಸಿಎಂ ಸ್ಪಷ್ಟವಾಗಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ಆಡಳಿತ ಹೇಗೆ ನಡೆಸುವುದು ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ನಾವೇನಿದ್ದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ನಿಮ್ಮ ರೀತಿ ನಾವು ನಾಗಪುರದಿಂದ ಸಲಹೆ ಪಡೆದುಕೊಳ್ಳುವುದಿಲ್ಲ ಸಂವಿಧಾನ ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ ಎಂದರು.