ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಕೆ. ಭಗವಾನ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕನ್ನಡ ಮೊದಲ ಜೇಮ್ಸ್‌ಬಾಂಡ್ ಸಿನಿಮಾ ಮಾಡಿರುವ ನಿರ್ದೇಶಕ ಭಗವಾನ್ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇವರಿಗೆ 94 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ಎಸ್.ಕೆ. ಭಗವಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಹೆಚ್ಚಿನ ಚಿತ್ರಗಳಲ್ಲಿ ಡಾ| ರಾಜ್‌ಕುಮಾರ್ ನಾಯಕರಾಗಿದ್ದರು. ಡಾ|ರಾಜ್‌ಕುಮಾರ್‌ಗೆ ಭಗವಾನ್ ಮೆಚ್ಚಿನ ನಿರ್ದೇಶಕರಾಗಿದ್ದರು.
ಚಿತ್ರಗಳ ಮೂಲಕ ಮನೆ ಮಾತಾಡಿದ್ದ ಭಗವಾನ್, 24 ಕಾದಂಬರಿಗಳನ್ನು ಸಿನೆಮಾವಾಗಿಸಿ ತೆರೆಗೆ ತಂದಿದ್ದರು. ನಿದೇರ್ಶನ ಮಾತ್ರವಲ್ಲದೆ ಹಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸ ಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ದೊರೈ – ಭಗವಾನ್ ಜೋಡಿಯು ನಿರ್ದೇಶಿಸಿದ್ದಾರೆ.
ಇವರ ಸುಮಾರು 30 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದು, ಅಣ್ಣಾವ್ರ ಬಗ್ಗೆ ಭಗವಾನ್ ಅವರು ಉತ್ತಮ ಬಾಂಧವ್ಯ ಹಾಗೂ ಗೌರವ ಹೊಂದಿದ್ದರು.
ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವವನ್ನೂ ಹೊಂದಿದ್ದಾರೆ.
ದೊರೈರಾಜರ ಮರಣದ ನಂತರ ಎಸ್.ಕೆ. ಭಗವಾನ್ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದರು. ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ.