ಮಂಗಳೂರು: ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ನಗರ ಕಮಿಷನರೆಟ್ ವ್ಯಾಪ್ತಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ನಿಯಮ ಪಾಲಿಸದವರ ವಿರುದ್ಧ ದಂಡ ಹಾಗೂ ಕೇಸ್ ಗ್ಯಾರಂಟಿ. ಪ್ರತೀ ಠಾಣೆಯಲ್ಲಿ ಪ್ರತಿದಿನ 100 ಮೋಟಾರು ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.
ಪ್ರತಿ ಠಾಣಾ ವ್ಯಾಪ್ತಿಯಲ್ಲಿ ನಿಗದಿತ ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಪಿ ವ್ಯಾಪ್ತಿಯಲ್ಲಿರುವ 15 ಪೊಲೀಸ್ ಠಾಣೆಗಳು ಪ್ರತಿದಿನ ತಲಾ 100 ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು. ಪಿಎಸ್‌ಐ ಹಾಗೂ ಎಎಸ್‌ಐ ತಲಾ 30 ಪ್ರಕರಣ ದಾಖಲಿಸಬೇಕು. ಸಂಚಾರ ಪೊಲೀಸ್ ಠಾಣೆಗಳು ತಲಾ 120 ಪ್ರಕರಣ, ಹೆದ್ದಾರಿ ಗಸ್ತು ಹಾಗೂ ಇಂಟರ್‌ಸೆಪ್ಟರ್ ವಾಹನಗಳು ಕಡ್ಡಾಯವಾಗಿ ತಲಾ 50 ಪ್ರಕರಣಗಳನ್ನು ದಾಖಲಿಸಿ ಎಂಬ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಆಯುಕ್ತರ ವ್ಯಾಪ್ತಿಯ ಠಾಣಾ ವ್ಯಾಪ್ತಿಗಳಲ್ಲೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಪೊಲೀಸರು ನಿಗಾ ಇಡಲಿದ್ದಾರೆ.