ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಲಾಕ್‌ಡೌನ್ ಸಡಿಲಿಕೆ ಮಾಡಿ ಸರಕಾರ ಆದೇಶವನ್ನು ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಾಣಿಜ್ಯ ವ್ಯವಹಾರಗಳು ಗರಿಗೆದರಿವೆ. ಸರಿಸುಮಾರು 2 ತಿಂಗಳಿಗೂ ಅಧಿಕ ಕಾಲ ಮನೆಯೊಳಗೆ ಬಂಧಿಯಾಗಿದ್ದ ಜನತೆ ಇಂದು ಅಧಿಕೃತವಾಗಿ ಹೊರಬರಲು ಸರಕಾರ ಅವಕಾಶ ಮಾಡಿಕೊಟ್ಟಿದೆ.
ಮಂಗಳೂರಿನಲ್ಲೂ ಇಂದು ಅಂಗಡಿ ವ್ಯವಹಾರಗಳು ತೆರೆದಿದ್ದು, ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಗಿಜಿಗಿಟ್ಟಿದವು. ಎಲ್ಲಿ ನೋಡಿದರಲ್ಲೂ ವಾಹನಗಳ ದಟ್ಟಣೆ ಕಂಡು ಬಂದಿದೆ. ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಕೂಡಾ ಕಂಡು ಬಂದಿದೆ. ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಪೊಲೀಸರ ಯಾವುದೇ ನಿರ್ಬಂಧ ಇಲ್ಲದಿರುವ ಕಾರಣ ಎಲ್ಲೆಡೆ ವಾಹನಗಳ ಸಂಚಾರವೂ ಜೋರಾಗಿಯೇ ಕಂಡು ಬಂದಿದೆ.
ಮಾಲ್‌ಗಳು ಓಪನ್
ಕೊರೊನಾ ಎರಡನೇ ಅಲೆಯ ಆರ್ಭಟದಿಂದ ಕ್ಲೋಸ್ ಆಗಿದ್ದ ಮಾಲ್ ಗಳು ಇಂದಿನಿಂದ ಓಪನ್ ಆಗಿದೆ. ನಿನ್ನೆಯಿಂದಲೇ ಮಾಲ್ ಸ್ವಚ್ಛಗೊಳಿಸುವುದರಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದರು. ಇಂದು ನಗರದ ಸಿಟಿ ಸೆಂಟರ್ ಮಾಲ್ ನಲ್ಲಿಯೂ ಪ್ರತಿಯೊಂದು ಭಾಗವನ್ನು ಸ್ಯಾನಿಟೈಸರ್ ಮಾಡಿ ಶುದ್ಧಗೊಳಿಸುವ ಕಾರ್ಯ ಬರದಿಂದ ನಡೆದಿತ್ತು.
ಇಂದು ಮುಂಜಾನೆಯಿಂದಲೇ ಮಾಲ್ ಗಳಿಗೆ ಜನರು ಸೀಮಿತ ಸಂಖ್ಯೆಯಲ್ಲಿ ಆಗಮಿಸಿದ್ದು, ಖರೀದಿಯಲ್ಲಿ ತೊಡಗಿಕೊಂಡಿದರು. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿ ಮಾಡುವಂತೆ ಸೂಚನೆಯ ಫಲಕವನ್ನು ಕೂಡ ಹಾಕಲಾಗಿದೆ. ಸರಕಾರದ ಕೋವಿಡ್ ಮಾರ್ಗಸೂಚಿ ಪಾಲನೆ ಅಗತ್ಯವಾಗಿದ್ದು, ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸೋದು ಉತ್ತಮ ಅನ್ನೋದು ಗ್ರಾಹಕರ ಅಭಿಪ್ರಾಯವಾಗಿದೆ.