ಕಾಬೂಲ್ : ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳು ಮರಳುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದೆ.
ಈಗ ದೇಶದ 2ನೇ ಅತಿದೊಡ್ಡ ನಗರವಾಗಿರುವ 6 ಲಕ್ಷ ಜನಸಂಖ್ಯೆಯುಳ್ಳ ಕಂದಹಾರ್ ನಗರವನ್ನು ಪ್ರವೇಶಿಸಿದ್ದಾರೆ.ವಿದೇಶಿ ಪಡೆಗಳು ತೆರಳುತ್ತಿದ್ದಂತೆ ಒಂದೊಂದೇ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಿರುವ ಉಗ್ರರು ಈಗಾಗಲೇ ದೇಶದ ಶೇ.85ರಷ್ಟುಭಾಗವನ್ನು ವಶಪಡಿಸಿಕೊಂಡಿರುವುದಾಗಿ ಪ್ರಕಟಿಸಿದ್ದಾರೆ.
ಇಷ್ಟೇ ಅಲ್ಲದೇ ಇರಾನ್ ಜೊತೆಗಿನ ವ್ಯಾಪಾರ ನಡೆಸುವ ಗಡಿ ಚೆಕ್ ಪೋಸ್ಟ್ ವಶಕ್ಕೆ ಪಡೆದಿದ್ದಾರೆ.ಕಂದಹಾರ್ ಗವರ್ನರ್ ವಕ್ತಾರರಾದ ಬಹಿರ್ ಅಹಮದಿ ಅವರು, ದೇಶದ ಎರಡನೇ ಅತಿದೊಡ್ಡ ನಗರ ಕಂದಹಾರ್ ಅನ್ನು ಕಳೆದ ಶುಕ್ರವಾರ ಉಗ್ರರು ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉಗ್ರರು ಮುನ್ನುಗ್ಗುತ್ತಿರುವುದನ್ನು ನೋಡಿದರೆ ಅಫ್ಘಾನಿಸ್ತಾನ ಪೂರ್ಣ ಪ್ರಮಾಣದಲ್ಲಿ ತಾಲಿಬಾನ್ ಕೈವಶವಾಗುವ ಅಪಾಯವಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
7 ಪೊಲೀಸ್ ಜಿಲ್ಲಾ ಪ್ರದೇಶದ ಮೂಲಕ ಕಂದಹಾರ್ ನಗರವನ್ನು ಮೊದಲ ಬಾರಿಗೆ ಪ್ರವೇಶಿಸಿದ್ದು, ಅಫ್ಘಾನ್ ಸೇನೆ ದಾಳಿ ನಡೆಸಿ ತಿರುಗೇಟು ನೀಡುತ್ತಿದೆ.
ಇದರಿಂದಾಗಿ ಎರಡೂ ಬಣಗಳ ನಡುವೆ ಸಂಘರ್ಷ ಜೋರಾಗಿದೆ.2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಸಿಟ್ಟಾದ ಅಮೆರಿಕ ಅಲ್ ಖೈದಾ ಉಗ್ರರನ್ನು ಮಟ್ಟ ಹಾಕಲು ದೊಡ್ಡ ಕಾರ್ಯಾಚರಣೆ ಆರಂಭಿಸಿತು.
ಕಳೆದ 20 ವರ್ಷಗಳಿಂದ ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಆದರೆ ಅಫ್ಘಾನಿಸ್ತಾನದಲ್ಲಿ ಸೈನ್ಯವನ್ನು ಕಳುಹಿಸಿದ್ದರಿಂದ ಅಮೆರಿಕಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿಯುವ ನಿರ್ಧಾರವನ್ನು ಅಮೆರಿಕ ಕೈಗೊಂಡಿದ್ದು, ಮೇ 1ರಿಂದ ಆ ಪ್ರಕ್ರಿಯೆ ಆರಂಭವಾಗಿದೆ.
ಇನ್ನು ಈ ಮಧ್ಯೆ ಕಂದಾಹರ್ ನಲ್ಲಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯನ್ನು ಕರೆ ತರಲು ವಾಯು ಪಡೆಯ ವಿಶೇಷ ವಿಮಾನವನ್ನು ಭಾರತ ಕಳುಹಿಸಿದೆ.
ಸದ್ಯ ಈಗ ಕಾಬೂಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ರಾಜತಾಂತ್ರಿಕರು ಮತ್ತು ಅಫ್ಘಾನ್ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.