ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್ ವ್ಯಾಪ್ತಿಯ ಪಾರ್ಪಿಕಲ್ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ ಕಚೇರಿ ಮುಂಭಾಗ ನಡೆಯಿತು.
ನಿಡ್ಲೆ ಪಂಚಾಯತ್‌ನಲ್ಲಿ ಜೂ.16ರಂದು ಬೀದಿ ಬದಿ ಅಂಗಡಿ ತೆರವು ಬಗ್ಗೆ ವಿಶೇಷ ಗ್ರಾಮಸಭೆ ಕರೆಯಲಾಗಿತ್ತು. ಮತ್ತೆ ಜೂ.22ರಂದು ವಿಶೇಷ ಸಭೆ ಕರೆದು ಅದರ ನಿರ್ಣಯದಂತೆ ಅಂಗಡಿ ತೆರವಿಗೆ ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆದಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಅನಧಿಕೃತ 12 ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿದ್ದರು.
ಇದನ್ನು ಖಂಡಿಸಿ ಇಂದು ದ.ಕ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಶ್ರೇಯಾಭಿವೃದ್ಧಿ ಸಂಘ, ಕೊಕ್ಕಡ ವಲಯ ಸಮಿತಿ ವತಿಯಿಂದ ಪಿಡಬ್ಲೂಡಿ ಆಫೀಸ್ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಇದರಲ್ಲಿ ಪ್ರತಿಭಟನೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಹಾಗೂ ಆದೇಶ ಉಲ್ಲಂಘಿಸಿದ ಅಧಿಕಾರಿಯನ್ನು ಅಮಾನತುಗೊಳಿಸಲು ಸಾಮಾಜಿಕ ಹೋರಾಟಗಾರ ಬಿ.ಎಂ ಭಟ್ ನೇತೃತ್ವದಲ್ಲಿ ಆಗ್ರಹಿಸಲಾಯಿತು.
ಜೊತೆಗೆ ನೋಟೀಸ್ ನೀಡದೇ ಏಕಾಏಕಿ ತೆರವುಗೊಳಿಸಿ ಅಂಗಡಿಯಲ್ಲಿದ್ದ ವಸ್ತು ಧ್ವಂಸಗೊಳಿಸಿದ ನಷ್ಟಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಇಂಜಿನಿಯರ್ ಶಿವಪ್ರಸಾದ್ ಪ್ರತಿಕ್ರಿಯೆ ನೀಡಿ, ‘ಚರಂಡಿಯ ಅಕ್ಕಪಕ್ಕದಲ್ಲಿ ಇರುವ ತಾತ್ಕಾಲಿಕ ವ್ಯಾಪಾರದ ಅಂಗಡಿಗಳಿಂದಾಗಿ ಚರಂಡಿಯ ಹರಿವಿಗೆ ತೊಂದರೆಯಾಗುವುದರಿಂದ ವ್ಯಾಪಾರಸ್ಥರನ್ನು ತೆರವುಗೊಳಿಸಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ, ಹಾಗೂ ಇತರ ಇಲಾಖೆಗಳ ಆದೇಶದಂತೆ ರಾಜ್ಯ ಹೆದ್ದಾರಿಗಳಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕಾನೂನು ಬಾಹಿರ ಯಾವುದೇ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ರು.