ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಲಾಗಿದ್ದು, ಆರೋಪಿ ಕಾಲಿಗೆ ಗುಂಡೇಟು ತಗುಲಿದ ಪರಿಣಾಮ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ರಸ್ತೆ ಕಳೆದ ಮೂರು ತಿಂಗಳ ಹಿಂದೆ (ಮಾರ್ಚ್ 15ರಂದು) ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ರಾಜು ಕೊಲೆಯಲ್ಲಿ ಈಗಾಗಲೇ ನಾಲ್ಕೈದು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ನೇತೃತ್ವದ ಪೊಲೀಸ್ ಸಿಬ್ಬಂದಿಯು ಇಂದು ಬೆಳಗಿನ ಜಾವ 3.30ಕ್ಕೆ ಕೊಲೆ ಆರೋಪಿ ವಿಶಾಲ್ಸಿಂಗ್ ಚೌಹಾಣ್ ಎಂಬುವವರನ್ನ ಬೆಳಗಾವಿಯ ವೀರಭದ್ರೇಶ್ವರ ನಗರದ ಕೋಯ್ಲಾ ಹೋಟೆಲ್ ಬಳಿ ಹಿಡಿಯಲು ಹೋಗಿತ್ತು.
ಈ ವೇಳೆ ಎಸಿಪಿ ಮತ್ತವರ ತಂಡದ ಮೇಲೆ ಮಾರಕಾಸ್ತ್ರಗಳಿಂದ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಎಸಿಪಿ ನಾರಾಯಣ ಭರಮನಿ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ.
ವಿಶಾಲ್ ಸಿಂಗ್ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಆರೋಪಿಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ವಿಶಾಲ್ಸಿಂಗ್ ಚೌಹಾಣ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಈತ ಕೊಲೆ, ಸುಲಿಗೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆರೋಪಿ ಪತ್ತೆಗೆ ಮೂರು ತಂಡ ಮಾಡಿಕೊಂಡು ಪೊಲೀಸರು ಬಲೆ ಬೀಸಿದ್ದರು.
ಎಸಿಪಿ ನಾರಾಯಣ ಭರಮಣಿ, ಇಬ್ಬರು ಸಿಪಿಐ, ಒಬ್ಬ ಪಿಎಸ್ಐ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ವೀರಭದ್ರ ನಗರದ ಕೋಯ್ಲಾ ಹೋಟೆಲ್ ಬಳಿ ಪೊಲೀಸರು ತೆರಳಿದ್ದರು.
ಈ ವೇಳೆ ರೌಡಿಶೀಟರ್ ವಿಶಾಲ್ಸಿಂಗ್ ಬಂಧಿಸುವ ವೇಳೆ ಸಿಸಿಬಿ ಪೊಲೀಸ್ ಪೇದೆ ಯಾಸೀನ್ ನದಾಫ್ ಎಡಗೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿ ಪರಾರಿಗೆ ಯತ್ನಿಸಿದ್ದನು.
ಆರೋಪಿ ವಿಶಾಲ್ಸಿಂಗ್ ಮೇಲೆ ಕರ್ನಾಟಕ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ಮೂರು ತಿಂಗಳಿಂದ ವಿಶಾಲ್ ಸಿಂಗ್ ತಲೆಮರೆಸಿಕೊಂಡಿದ್ದರು.