ಬಂಟ್ವಾಳ: ಮಹಿಳೆಯರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭ ಚಾಲಕ ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದ್ದರಿಂದ ಕಾರು ನಿಲ್ಲಿಸಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ನಿನ್ನೆ ನಡೆದಿದೆ.
ಕಾಡುಮಠ ಕಾಲೋನಿ ನಿವಾಸಿ ಸಾಗರ್ (26) ಬಂಧಿತ ಆರೋಪಿ.
ತೊಕ್ಕೊಟ್ಟು ಸಮೀಪದ ಪಿಲಾರಿನ ಮಹಿಳೆಯರಿಬ್ಬರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗಲು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಹೊರಟಿದ್ದರು.
ಆದರೆ ನಿಗದಿತ ಸ್ಥಳಕ್ಕೆ ತಲುಪಬೇಕಾಗಿದ್ದ ಕಾರು ಚಾಲಕ ಬದಲಿ ರಸ್ತೆಗಳ ಮೂಲಕ ವೇಗದಲ್ಲಿ ಒಟ್ಟಾರೆಯಾಗಿ ಚಲಾಯಿಸಿದ್ದು, ಆತಂಕಿತರಾದ ಮಹಿಳೆಯರು ಬೊಬ್ಬೆ ಹಾಕಿದ್ದಾರೆ.
ತಲೆ ಕಾರಿನಿಂದ ಹೊರಗೆ ಹಾಕಿ ಸಹಾಯಕ್ಕಾಗಿ ಮಹಿಳೆಯರು ಮೊರೆ ಇಡುವುದನ್ನು ಕಂಡ ಸ್ಥಳೀಯರು ಇದು ಅಪಹರಣ ಇರಬಹುದು ಎಂಬ ಶಂಕೆಯಿಂದ ಸಾಲೆತ್ತೂರು ಸಮೀಪದ ಕಾಡುಮಠದಲ್ಲಿ ಕಾರು ತಡೆಯುವಲ್ಲಿ ಯಶಸ್ವಿಯಾದರು.
ಪರಿಶೀಲನೆ ನಡೆಸಿದ ಪೊಲೀಸರು ಆತನ ಲೈಸೆನ್ಸ್ ಹಾಗೂ ಕುಡಿದ ಮತ್ತಿನಲ್ಲಿ ಚಲಾಯಿಸಿದ್ದಾನೆಯೇ ಎಂದು ವಿಚಾರಣೆ ನಡೆಸಿದಾಗ ಆತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ಈ ರೀತಿಯ ವರ್ತನೆ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.
ಆತನ ಕಾರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.