Tuesday, May 30, 2023

ಹುಬ್ಬಳ್ಳಿಯಲ್ಲಿ ಪ್ರಧಾನಿ ರೋಡ್ ಶೋ : ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಿದ ನರೇಂದ್ರ ಮೋದಿ..!

ಹುಬ್ಬಳ್ಳಿ : ಯುವಕರೇ ಈ ದೇಶವನ್ನು ಮುನ್ನಡೆಸುತ್ತಿರುವ ಶಕ್ತಿಯಾಗಿದ್ದು, ನಿಮ್ಮಲ್ಲಿ ಹೊಸ ಹೊಸ ಚಿಂತನೆಗಳು, ಆಲೋಚನೆಗಳಿದ್ದರೆ ಮುನ್ನುಗ್ಗಿ ಅದನ್ನು ಸಾಧಿಸಿ ಎಂದು ಯುವ ಸಮೂಹಕ್ಕೆ ಪ್ರಧಾನಿ ಕರೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿ ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೂರು ಸಾವಿರ ಮಠ, ಸಿದ್ಧಗಂಗಾ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು.

ರಾಣಿ ಚೆನ್ನಮ್ಮನ ನಾಡು, ಸಂಗೋಳ್ಳಿ ರಾಯಣ್ಣನಬೀಡು, ಈ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಈ ಮಣ್ಣಿನ ವೀರ ಪರಂಪರೆ, ತ್ಯಾಗ, ಸಾಧನೆಯನ್ನು ಹೊಗಳಿದರು. ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದ ನೆಲದೊಂದಿಗಿನ ಸಂಬಂಧವನ್ನೂ ಸ್ಮರಿಸಿದರು.

ಈ ನೆಲ ದೇಶಕ್ಕೆ ಒಬ್ಬರಿಗಿಂತ ಒಬ್ಬರು ಮಿಗಿಲಾದ ಸಂಗೀತ ಸಾಧಕರನ್ನು ನೀಡಿದೆ. ಪಂಡಿತ್ ಕುಮಾರ್ ಗಂಧರ್ವ, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಭಾರತ ರತ್ನ ಭೀಮಸೇನ ಜೋಶಿ, ಪಂಡಿತೆ ಗಂಗೂಭಾಯಿ ಹಾನಗಲ್ ಅವರಿಗೆ ಹುಬ್ಬಳ್ಳಿಯ ನೆಲದಲ್ಲಿ ನನ್ನ ನಮನಗಳನ್ನು ಅರ್ಪಿಸುವೆ ಎಂದರು.

ಕರ್ನಾಟಕದ ನೆಲವು ಇಂತಹ ಅನೇಕ ಮಹಾನ್ ಸಾಧಕರನ್ನು ನೀಡಿದೆ. ಬಹಳ ಸಣ್ಣವಯಸ್ಸಿನಲ್ಲೇ ಅಸಾಧಾರಣ ಕಾರ್ಯಗಳನ್ನು ಮಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರಾಗಿದ್ದರು.

ಇನ್ನು ಅವರ ಸೇನಾನಾಯಕ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಬ್ರಿಟಿಷ್ ಸೈನ್ಯದ ಜಂಘಾಬಲ ಉಡುಗಿಸಿದ್ದರು.

ಇದೇ ನೆಲದ ನಾರಾಯಣ್ ಮಹಾದೇವ್ ಡೋಣಿ ತನ್ನ 14ನೇ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮನಾಗಿದ್ದ.

ಯುವಶಕ್ತಿಯ ತಾಕತ್ತು ಏನು ಎಂಬುದನ್ನು ಕರ್ನಾಟಕದ ಸುಪುತ್ರ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ನ ಶಿಖರದಲ್ಲಿ -55 ಡಿಗ್ರಿ ತಾಪಮಾನದಲ್ಲೂ 6 ದಿನವೂ ಸಾವಿನೊಂದಿಗೆ ಹೋರಾಡಿ ಜೀವಂತವಾಗಿ ಮರಳಿದ್ದರು ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ಇದೇವೇಳೆ ಸ್ವಾಮಿ ವಿವೇಕಾನಂದರ “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.” ವಿವೇಕಾನಂದರ ಈ ಘೋಷ ವಾಕ್ಯವನ್ನು ಕನ್ನಡದಲ್ಲೇ ಉಸುರಿದರು.

ವಿವೇಕಾನಂದರ ಈ ಉದ್ಘೋಷ ಭಾರತದ ಯುವಕರ ಜೀವನ ಮಂತ್ರವಾಗಿದೆ. ಇವತ್ತು ಈ ಅಮೃತಘಳಿಗೆಯಲ್ಲಿ ನಮ್ಮ ಕರ್ತವ್ಯವನ್ನು ನೆನೆಪಿಸಿಕೊಂಡು, ತಿಳಿದುಕೊಂಡು ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಿದೆ.

ಮತ್ತು ಇದರಲ್ಲಿ ಭಾರತದ ಯುವಕರ ಮುಂದೆ ಸ್ವಾಮಿ ವಿವೇಕಾನಂದರು ನೀಡಿದ ದೊಡ್ಡ ಪ್ರೇರಣೆಯಿದೆ.

ಈ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಚರಣಗಳಿಗೆ ಪ್ರಣಾಮ ಸಲ್ಲಿಸುವೆ. ಇದೇವೇಳೆ ನಾನು ಕರ್ನಾಟಕದ ಮತ್ತೊಬ್ಬ ಮಹಾನ್ ಸಂತರಾಗಿರುವ ಸಿದ್ದೇಶ್ವರ ಸ್ವಾಮಿಗಳಿಗೂ ಆದರಪೂರ್ವಕ ಶ್ರದ್ಧಾಂಜಲಿ ಸಲ್ಲಿಸುವೆ ಎಂದರು.

ಯಾವಾಗ ಯುವಕರು ಜಾಗೃತರಾಗಿರುತ್ತಾರೋ, ಯಾವಾಗ ಯುವ ಶಕ್ತಿ ಜಾಗೃತವಾಗಿರುತ್ತದೋಆಗ ಭವಿಷ್ಯವನ್ನು ರೂಪಿಸುವುದು, ರಾಷ್ಟ್ರ ನಿರ್ಮಾಣ ಮಾಡುವುದು ಅಷ್ಟೇ ಸುಲಭದ ಕೆಲಸ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.

ವಿಶ್ವದಲ್ಲೇ ಅತಿ ಹೆಚ್ಚಿನ ಯುವಕರು ಭಾರತದಲ್ಲಿದ್ದಾರೆ. ಯುವಶಕ್ತಿಯೇ ಚಾಲನಾ ಶಕ್ತಿಯಾಗಿದೆ. ಯುವ ಶಕ್ತಿಯೇ ಭಾರತದ ಗುರಿ ನಿರ್ದೇಶಿಸುತ್ತಿದೆ.

ಈಗ ಇದೇ ಭಾರತದ ಚಾಲಕನ ಸ್ಥಾನದಲ್ಲಿದೆ. ಇದೇ ಆಶಾವಾದದೊಂದಿಗೆ ಭಾರತದ ಯುವಕರು ಮುನ್ನುಗ್ಗಬೇಕಿದೆ.

ದೇಶವನ್ನು ಕಟ್ಟುವಲ್ಲಿ ಮುಂದಿನ 25 ವರ್ಷ ಬಹಳ ಮಹತ್ವದ್ದಾಗಿದೆ. ಈಗ ನಮ್ಮ ಆರ್ಥ ವ್ಯವಸ್ಥೆ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ, ಅದನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಬೇಕಿದೆ. ರನ್ ವೇ ತಯಾರಾಗಿದೆ, ನೀವು ಟೇಕಾಫ್ ಮಾಡಬೇಕಿದೆ ಎಂದರು.

ಹಿಂದೆ ಡಿಜಿಟಲೀಕರಣ, ಜನಧನ್ ಯೋಜನೆ, ಸ್ವಚ್ಛ ಭಾರತ್, ಕೋವಿಡ್ ಕಾಲದ ನಿರ್ವಹಣೆಗಳನ್ನೆಲ್ಲಾ ಕೆಲವರು ಅಪಹಾಸ್ಯ ಮಾಡಿದರು.

ಈಗ ನಾವು ಎಲ್ಲವನ್ನು ಯಶಸ್ವಿಯಾಗಿದ್ದೇವೆ. ಹಾಗಾಗಿ ಇವತ್ತು ನಿಮ್ಮಲ್ಲೂ ಒಳ್ಳೆಯ ಐಡಿಯಾ ಇದ್ರೆ ಮುನ್ನುಗ್ಗಿ, ಅದನ್ನು ಕಾರ್ಯರೂಪಕ್ಕೆ ತನ್ನಿ ಎಂದು ಪ್ರಧಾನಿ ಮೋದಿ ಹೇಳಿದರು.

ಜನರನ್ನು ಮೋಡಿ ಮಾಡಿದ ಪ್ರಧಾನಿ ರೋಡ್ ಶೋ..

ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲು ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ, ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಅದು ಒಂದೆರಡು ಕಿಲೋಮೀಟರ್ ಅಲ್ಲ. ಬರೋಬ್ಬರಿ 9 ಕಿಲೋಮೀಟರ್ ರೋಡ್‍ ಶೋ ಮಾಡಿದ್ದಾರೆ.

ವಿಮಾನ ನಿಲ್ದಾಣದಿಂದ ಶುರುವಾದ ರೋಡ್ ಶೋ, ಕಾರ್ಯಕ್ರಮ ನಡೆಯುವ ರೈಲ್ವೇ ಮೈದಾನದವರೆಗೂ ಒಂದು ಗಂಟೆ ಕಾಲ ಸಾಗಿತು.

ಮಧ್ಯಾಹ್ನ 3.35ಕ್ಕೆ ಶುರುವಾದ ಮೋದಿ ರೋಡ್ ಶೋ ಸಂಜೆ 4.40ಕ್ಕೆ ಮುಗಿಯಿತು.

ಮೋದಿ ರೋಡ್‍ಶೋಗೆ ಭರ್ಜರಿ ಸ್ಪಂದನೆ ಸಿಕ್ಕಿತ್ತು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತ ಸಾವಿರಾರು ಜನ “ಮೋದಿ ಮೋದಿ” ಎಂದು ಘೋಷಣೆ ಕೂಗಿದರು.

ಮಾರ್ಗದುದ್ದಕ್ಕೂ ಮೋದಿಗೆ ಹೂಮಳೆಯ ಸ್ವಾಗತ ಸಿಕ್ಕಿತು. ಅಭಿಮಾನಿಗಳು ಕೇಸರಿ ಬಟ್ಟೆ ಧರಿಸಿ ಮೋದಿ ಭಾವ ಚಿತ್ರ ಹಿಡಿದು ನಿಂತಿದ್ದರು. ಒಂದು ಗಂಟೆ ಕಾಲ ಮೋದಿ ಕೈಬೀಸುತ್ತಲೇ ಇದ್ದರು. ಯಾವುದೇ ಹಂತದಲ್ಲಿ ಮೋದಿಯಲ್ಲಿ ಒಂದಿನಿತು ದಣಿವು ಕಂಡುಬರಲಿಲ್ಲ.

LEAVE A REPLY

Please enter your comment!
Please enter your name here

Hot Topics