ಉಡುಪಿ : ರಾಜ್ಯದ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ ಪ್ರಕರಣದ ತನಿಖೆಯ ಕೊಂಡಿ ಕರಾವಳಿಯ ಉಡುಪಿ ಜಿಲ್ಲೆಗೂ ವ್ಯಾಪಿಸಿದೆ.
ಪ್ರಸ್ತುತ ನಾಪತ್ತೆಯಾಗಿರುವ ಅತ್ಯಾಚಾರ, ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಯಾನೆ ಸ್ಯಾಂಟ್ರೊ ರವಿ ಕೆಲವು ಸಮಯದ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅಂಗಡಿಯೊಂದಕ್ಕೆ ಬಂದಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಹೆಬ್ರಿಗೆ ಬಂದು ತನಿಖೆ ನಡೆಸಿದ್ದಾರೆ.
ಹೆಬ್ರಿ- ಆಗುಂಬೆ ರಸ್ತೆಯಲ್ಲಿರುವ ಗೂಡಂಗಡಿಗೆ ಭೇಟಿ ನೀಡಿದ್ದ ಸ್ಯಾಂಟ್ರೋ ರವಿ ಗೂಡಂಗಡಿ ಮಾಲಕ ರಮೇಶ್ ಕುಲಾಲ್ ಅವರ ಬಳಿ ಮೊಬೈಲ್ ಫೋನ್ ಪಡೆದು ಕರೆ ಮಾಡಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಮೈಸೂರು ಪೊಲೀಸರು ಹೆಬ್ರಿಗೆ ಆಗಮಿಸಿದ್ದರು.
ರಮೇಶ್ ಕುಲಾಲ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿಯ ವರೆಗೆ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಅವರ ಮೊಬೈಲ್ ಫೋನನ್ನು ಪಡೆದುಕೊಂಡು ಕಳುಹಿಸಿ ಕೊಟ್ಟಿದ್ದಾರೆ.
ಸ್ಯಾಂಟ್ರೋ ರವಿ ಹೆಬ್ರಿಯಿಂದ ಶಿವಮೊಗ್ಗ ಕಡೆಗೆ ತೆರಳಿರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡಾ ಹೆಬ್ರಿಯಿಂದ ಆಗುಂಬೆ ಮಾರ್ಗವಾಗಿ ಶಿವಮೊಗ್ಗ ಕಡೆ ತೆರಳಿದ್ದಾರೆ.