ಹೈದರಾಬಾದ್: ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರಾಜ್ ಸ್ಪರ್ಧಿಸಬಾರದು ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಪ್ರಕಾಶ್ ರಾಜ್ ಮೂಲತಃ ಕನ್ನಡದವರು. ಅವರ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಎಂಎಎ ಎಲೆಕ್ಷನ್ನಲ್ಲಿ ಸ್ಪರ್ಧಿಸುವುದು ಸರಿಯಲ್ಲ ಎಂದು ತಕರಾರು ತೆಗೆದಿದ್ದಾರೆ.
ಈ ಪ್ರಶ್ನೆಗೆ ಖಾರವಾಗಿ ಉತ್ತರಿಸಿರುವ ಅವರು ‘ನಾನು ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡಾಗ ಯಾರೂ ಕೂಡ ನಾನು ಸ್ಥಳೀಯನಲ್ಲ ಎಂದು ಹೇಳಲಿಲ್ಲ. ನನ್ನ ಸಹಾಯಕರಿಗಾಗಿ ನಾನು ಹೈದರಾಬಾದ್ನಲ್ಲಿ ಮನೆ ಖರೀದಿಸಿದೆ. ನನ್ನ ಮಗ ಹೈದರಾಬಾದ್ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್ ವಿಳಾಸ ಕೂಡ ಹೈದರಾಬಾದ್ನದ್ದು. ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ? ಎಂದು ಪ್ರಶ್ನಿಸಿದರು.
MAA ಅಧ್ಯಕ್ಷನಾಗಲು ನಾನು ಸೂಕ್ತ ಎಂದು ನನ್ನ ಸಹ-ಕಲಾವಿದರು ಹೇಳಿದರು. ಕಳೆದ ವರ್ಷದ ಘಟನೆಗಳನ್ನು ನೋಡಿದ ಬಳಿಕ ನಾನು ಈ ತೀರ್ಮಾನಕ್ಕೆ ಬಂದೆ’ ಎಂದು ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದಾರೆ. ರೈ ಬೆಂಬಲಕ್ಕೆ ಮೆಗಾಸ್ಟಾರ್ ಚಿರಂಜೀವಿ ಇದ್ದು ಕಳೆದ ವರ್ಷದಿಂದಚೆಗೆ MAAನಲ್ಲಿ ನಡೆಯುತ್ತಿರುವ ಬೆಳವಣಿಗೆ ಮೆಗಾಸ್ಟಾರ್ ಗೆ ಅಸಮಾಧಾನ ತರಿಸಿದ್ದು, ಆದ್ದರಿಂದ ಪ್ರಕಾಶ್ ರೈ ಅನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.