ಕಾವೂರು ಮಲ್ಲಿ ಲೇಔಟ್‌ನ ಉದ್ಯಮಿ ಹತ್ಯೆ:ಹಣಕ್ಕಾಗಿ ಚೂರಿ ಇರಿದು ಹತ್ಯೆ ಮಾಡಿದ್ದ ಆರೋಪಿಗಳು
ಕಾವೂರು:ಕೇರಳ ಮೂಲದ ಉದ್ಯಮಿ, ಕಾವೂರು ಮಲ್ಲಿ ಲೇಔಟ್‌ನ ಸುರೇಂದ್ರನ್(೬೦) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸರು ಅಶೋಕನಗರದ ಸಂತೋಷ್ ಸಪಲ್ಯ(೪೨) ಮತ್ತು ಗದಗ ನರಗುಂದ ನಿವಾಸಿ ಸಿದ್ದು ಯಾನೆ ಸಿದ್ಧಪ್ಪ(೨೮)ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲತಃ ಕೇರಳ ಕಾಞಂಗಾಡಿನ ನಿವಾಸಿ ಸುರೇಂದ್ರನ್ ಕಳೆದ ಹಲವು ವರ್ಷಗಳಿಂದ ಕಾವೂರಿನ ಮಲ್ಲಿ ಲೇಔಟ್‌ನಲ್ಲಿ ಪತ್ನಿ ಜೊತೆಗೆ ವಾಸ ಮಾಡುತ್ತಿದ್ದರು.
ಅಕ್ಟೋಬರ್ ೩ರಂದು ಸುರೇಂದ್ರನ್ ಅವರು ಹೊರಗಡೆ ಹೋಗಿ ವಾಪಾಸು ಬರುತ್ತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಅವರ ರೂಮಿನಲ್ಲಿ ಚೂರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು.
ಸಂಜೆ ಮನೆಗೆ ಮರಳಿದ ಪತ್ನಿ ಸುರೇಂದ್ರನ್ ಹತ್ಯೆಯಾಗಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಸುರೇಂದ್ರನ್ ಕೆಲವು ಸಮಯದ ಹಿಂದೆ ಸಂತೋಷ್ ಅವರಲ್ಲಿ ಮನೆಗೆ ಸಂಬಂಧಿಸಿದ ಕೆಲಸ ಮಾಡಿಸಿದ್ದು, ಅದರ ಸುಮಾರು ೨೫,೦೦೦ ರೂಪಾಯಿ ಹಣ ನೀಡಲು ಬಾಕಿ ಇತ್ತು. ಸಂತೋಷ್ ದಿನವೂ ಮನೆಗೆ ಬಂದು ಹಣ ಕೇಳುತ್ತಿದ್ದರು. ಆದರೆ ಹಣ ಕೊಡಲು ನಿರಾಕರಿಸುತ್ತಿದ್ದ ಸುರೇಂದ್ರನ್ ಉಡಾಫೆ ಮಾತನಾಡುತ್ತಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡು ಕೊಲೆ ಕೃತ್ಯ ನಡೆಸಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.