ಬಂಟ್ವಾಳ: ಯುವಕನೊಬ್ಬ ದೇಶಸೇವೆಗೆ ನೇಮಕವಾದಾಗ ನಮ್ಮೂರಿನವ, ನಮ್ಮ ಗ್ರಾಮದವ, ನಮ್ಮ ಕುಟುಂಬದವ ಹೀಗೆ ಹೇಳಿಕೊಂಡು ತಿರುಗಾಡುತ್ತಾರೆ.
ಅದೇ ಆತ ವೀರ ಮರಣವಪ್ಪಿದರೆ ಆತನ ಕುಟುಂಬದ ಜೊತೆ ನಾವೀದ್ದೇವೆ ಎನ್ನುವವರು ಹತ್ತಾರು ಮಂದಿ, ಆದೇ ಆತ ಕಾಲವಾಗಿ ವರ್ಷದಲ್ಲಿ ಅದೆಲ್ಲವೂ ಗೌಣವಾಗಿರುತ್ತದೆ. ಅಂತಹದ್ದೇ ಪರಿಸ್ಥಿತಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಹುತಾತ್ಮ ಸೈನಿಕನ ಪತ್ನಿ ಜಯಂತಿ ಎಂಬುವವರು ತನಗೊಂದು ಸರಕಾರಿ ಉದ್ಯೋಗ ಕೊಡುವಂತೆ ಅಲೆದಾಡಿದರೂ ಈಕೆಯ ಮನವಿಗೆ ಸ್ಪಂದನೆ ದೊರೆತಿಲ್ಲ.
ಈಕೆಯ ಪತಿ ಸುಬ್ರಹ್ಮಣ್ಯ ನಾಯ್ಕ ಭಾರತೀಯ ಅರೆಸೇನಾ ಪಡೆ ಸಿಆರ್‌ಪಿಎಫ್‌ನಲ್ಲಿ 19 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯ ಅವರು ಶ್ರೀನಗರದಲ್ಲಿ ಎಎಸೈ ಆಗಿ ರೆಡಿಯೋ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿದ್ದ ಸಂದರ್ಭದಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.
ಮದುವೆಯಾಗಿ ಎರಡು ವರ್ಷಗಳಲ್ಲೇ ಪತಿಯನ್ನು ಕಳೆದುಕೊಂಡ ಜಯಂತಿ ಈವರೆಗೂ ಹಲವರ ಬಳಿ ಕಾಡಿಬೇಡಿ ತನ್ನ ಸಂಸಾರವನ್ನು ಸಾಗಿಸಿದ್ದು, ಇದೀಗ ಮಗನ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆಯಾಗಿದೆ.
ಪತಿಯ ಸಾವಿನ ಸಂದರ್ಭದಲ್ಲಿ ಸಿಆರ್‌ಪಿಎಫ್‌ನಲ್ಲಿ ಉದ್ಯೋಗಕ್ಕೆ ಕರೆ ಬಂದಿತ್ತಾದರೂ, ಆ ಸಮಯದಲ್ಲಿ ತುಂಬು ಗರ್ಭಿಣಿಯಾಗಿದ್ದ ಜಯಂತಿ ಕೆಲಸಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಾಗಿತ್ತು.
ಬಳಿಕ ಮಗನನ್ನು ಬೆಳೆಸುವ, ಸಂಸಾರ ಸರಿದೂಗಿಸುವ ಜಂಜಾಟದಲ್ಲಿ ಮುಳುಗಿದ್ದರು. ಇದೀಗ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದು, ತಮಗೊಂದು ಸಣ್ಣ ಉದ್ಯೋಗವನ್ನಾದರೂ ಜಿಲ್ಲೆಯಲ್ಲಿ ನೀಡುವಂತೆ ಕಛೇರಿಯಿಂದ ಕಛೇರಿಗೆ ಅಲೆದು ಮನವಿ ಮಾಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರಿಗೂ ಮನವಿ ಮಾಡಿದ್ದಾರೆ. ವಿಶೇಷ ಅಂದರೆ ಸೈನಿಕನಿಗೆ ಸರಕಾರದ ವತಿಯಿಂದ ನೀಡುವ ಭೂಮಿಯೂ ಯೋಧನ ಪತ್ನಿಗೆ ದೊರೆತಿಲ್ಲ. ಜಯಂತಿ ಈಗಲೂ ಬಾಡಿಗೆ ಮನೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ.
ಜಯಂತಿ ಪರವಾಗಿ ಇದೀಗ ಮಾಜಿ ಅರೆಸೇನಾ ಪಡೆ ಸಂಘವೂ ಬೆಂಬಲಕ್ಕೆ ನಿಂತಿದ್ದು, ಸರಕಾರ ಕೂಡಲೇ ಈ ಜಯಂತಿ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. .