ಮಂಗಳೂರು : ಭ್ರಷ್ಟಾಚಾರ ನಡೆಸಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಇನ್ಸ್‌ಪೆಕ್ಟರ್ ನ್ನು ಅಪರಾಧಿ ಎಂದು ಪರಿಗಣಿಸಿ ಮಂಗಳೂರು ಲೊಕಾಯುಕ್ತ ನ್ಯಾಯಾಲಯ 4 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದೆ.
ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಗಂಗಿರೆಡ್ಡಿ ಆದಾಯಕ್ಕಿಂತ ಹೆಚ್ಚು ಆಸ್ತಿಗಿಳಿಸಿದ ಆರೋಪ ಹೊತ್ತಿದ್ದರು.
2009ರಲ್ಲಿ ಕರಾವಳಿ ಕಾವಲು ಪಡೆಯ ಇನ್ಸಪೆಕ್ಟರ್ ಆಗಿದ್ದ ಗಂಗಿರೆಡ್ಡಿ ಆದಾಯಕ್ಕಿಂತಲೂ ಮೀರಿ ಹೆಚ್ಛಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಮೇಲೆ ಆಗಿನ ಲೋಕಾಯುಕ್ತ ಡಿ. ವೈ.ಎಸ್.ಪಿ. ಸದಾನಂದ ವರ್ಣೇಕರ್ ಮತ್ತು ಅವರ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂದು ಪ್ರಕರಣ ದಾಖಲಿಸಿತ್ತು.
ಈ ಸಂದರ್ಭ ಗಂಗಿ ರೆಡ್ಡಿ ಅವರು ಸುಮಾರು ಹತ್ತೊಂಬತ್ತು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು.
ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಡಿ.ವೈ. ಎಸ್.ಪಿ. ಆಗಿದ್ದ ಎಮ್. ವಿಟ್ಟಲ್ ದಾಸ್ ಪೈ ಆರೋಪಿ ಗಂಗಿ ರೆಡ್ಡಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಅವರಿಂದ ಶಿಕ್ಷೆ ಪ್ರಕಟಿಸಿದ್ದು, ನ್ಯಾಯಾಧೀಶ ರಿಂದ 111 ಪುಟಗಳ ಸುದೀರ್ಘ ಆದೇಶದನ್ವಯ ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 13 (1) (ಇ) ರ ಅಡಿ ಯಲ್ಲಿ ಆರೋಪಿ ಗಂಗಿ ರೆಡ್ಡಿ ಅಪರಾಧ ಎಸಗಿದ್ದಾರೆಂದು ಸಾಭೀತಾಗಿದ್ದು, ಆಪರಾಧಿಗೆ 4 ವರ್ಷ ಸಾದಾ ಸಜೆ ಮತ್ತು ರೂ 5,00,000 ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ಎಂದು ಘೋಷಿಸಿದ್ದಾರೆ.