ಬೆಂಗಳೂರು: ವಾಹನ ಖರೀದಿಗೆಂದು ಬಂದ ರೈತರೊಬ್ಬರಿಗೆ ತುಮಕೂರಿನ ಮಹೀಂದ್ರ ಡೀಲರ್ ಅವಮಾನ ಮಾಡಿದ್ದಾರೆ ಎಂಬ ಸಂಗತಿ ರಾಷ್ಟ್ರಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು.
ಇದೀಗ ಘಟನೆ ಕುರಿತು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
‘ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ.
ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ’ ಎಂದು ಹೇಳಿದ್ದಾರೆ.
ತುಮಕೂರು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರ ಕಂಪನಿಯ ಸಿಇಒ ವಿಜಯ್ ನಕ್ರಾ, ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್ಗಳು ಅತಿಮುಖ್ಯ ಪಾತ್ರ ವಹಿಸುತ್ತಾರೆ.
ನಮ್ಮೆಲ್ಲಾ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.