DAKSHINA KANNADA
ಉಪ್ಪಿನಂಗಡಿ: ಕಾಣಿಕೆ ರೂಪದಲ್ಲಿ ನೀಡಿದ ಚಿನ್ನ ಅಡವಿಟ್ಟ ದೇವಾಲಯದ ಮಾಜಿ ಅಧ್ಯಕ್ಷ…!
ಉಪ್ಪಿನಂಗಡಿ: ಬ್ರಹ್ಮಕಲಶೋತ್ಸದ ವೇಳೆ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಿಗೆಯೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷನೋರ್ವ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಳೆದ ಡಿಸೆಂಬರ್‌ನಲ್ಲಿ ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿತ್ತು. ಈ ಸಂದರ್ಭ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಮಾಲೆಯನ್ನು ಸಮರ್ಪಿಸಿದ್ದರು.ಜೊತೆಗೆ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿತ್ತು.
ಕಳೆದ ರವಿವಾರದಂದು ಆಡಳಿತಾಧಿಕಾರಿಯ ಸಮ್ಮುಖದಲ್ಲಿ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆಯೇ, ಮಂಗಳವಾರ ತನ್ನ ಅಧ್ಯಕ್ಷೀಯ ಸ್ಥಾನದ ದುರುಪಯೋಗ ನಡೆಸಿ ದೇವಳದ ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿರಿಸಿ ಹಣ ಪಡೆದಿದ್ದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಿಂದ ಬಿಡಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದನ್ವಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮಕೈಗೊಂಡಿದ್ದಾರೆ.ಈ ಮಧ್ಯೆ ದೇವಾಲಯದಲ್ಲಿ ಇತ್ತೆನ್ನಲಾದ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ನೀಡಿದ್ದ 2 ಪವನ್ ತೂಕದ ಚಿನ್ನದ ಸರ ಇನ್ನೂ ನಾಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆದಿದೆ.
bangalore
“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.
ಈ ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸದರು.
ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ‘ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು’ ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು.
ಈ ಸಂದರ್ಭ ರಚಿತರಾಮ್ ಜೊತೆ ಹಾಡಲು ಹೇಳಿದಾಗ ಅವರು ಕೂಡ “ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು” ಎಂದು ನಗ್ತಾ ನಗ್ತಾ ಹಾಡಿದರು.
ಬಳಿಕ ಮಾತನಾಡಿದ ನಟಿ ವಿದ್ಯಾರ್ಥಿಗಳು ಇಂತಹ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಮತ್ತೇ ಇಂತಹ ವೇದಿಕೆ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶನ ಮಾಡಬೇಕು. ಬೇರೆ ಯಾರೂ ಕೂಡ ನಮಗೆ ಹೇಳಲು ಬರುವುದಿಲ್ಲ.
ಯಾರೂ ಕೂಡ ಸಪೋರ್ಟ್ ಮಾಡುವುದಿಲ್ಲ. ಸ್ವಾಯತ್ತತೆಯಿಂದ ನಾವು ಗೆಲ್ಲಬೇಕು. ಒಳ್ಳೆ ಒಳ್ಳೆ ವೇದಿಕೆ ಸಿಕ್ಕಾಗ ಬಿಡಬಾರದು. ಅದರ ಜೊತೆಗೆ ನಮ್ಮ ಗುರುಗುಳಿಗೆ ಹಾಗೂ ತಮ್ಮ ಪೋಷಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ ಜೊತೆಗೆ ಅವರನ್ನು ಪ್ರೀತಿಸಿ ಎಂದರು.
ಈ ವೇಳೆ ರಚಿತರಾಮ್ ಕನ್ನಡದಲ್ಲಿ ಮಾತನಾಡಿದಾಗ ವಿದ್ಯಾರ್ಥಿಗಳು ತುಳುವಿನಲ್ಲಿ ಮಾತನಾಡಿ ಎಂದು ಕೂಗಾಡಿದರು. ಆಗ ಅವರು ಎಂಚ ವುಲ್ಲರ್ ಮರ್ರೆ…ಹುಷಾರ್ ವುಲ್ಲರಾ…ಎಂದು ತುಳುವಿನಲ್ಲಿ ಮಾತನಾಡಿದರು.
BELTHANGADY
Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!
ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.
ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
DAKSHINA KANNADA
Mangaluru: 4 ತಿಂಗಳ ಮಗುವನ್ನು ಉಸಿರುಕಟ್ಟಿಸಿ ಕೊಂದ ತಾಯಿ ಕೂಡ ಜೀವಾಂತ್ಯ..!
ಮಂಗಳೂರು: ತನ್ನ ಪುಟ್ಟ ಕಂದಮ್ಮನನ್ನು ನೀರಿನ ಟಬ್ ಒಳಗೆ ಮುಳುಗಿಸಿ ತಾನೂ ನೇಣು ಬಿಗಿದುಕೊಂಡು ಹೆತ್ತಬ್ಬೆಯೊಬ್ಬಾಕೆಯ ಕೃತ್ಯ ಮನಕಲಕಿದ ಘಟನೆ ಮಂಗಳೂರಿನ ಗುಜ್ಜರಕರೆ ಬಳಿ ನಡೆದಿದೆ.
ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸ ಮಾಡುವ ಫಾತಿಮಾ ರುಕಿಯಾ(23) ಎಂಬಾಕೆ ತನ್ನ ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್ ಎಂಬಾತನನ್ನು ನೀರಿನ ಟಬ್‌ನೊಳಗೆ ಮುಳುಗಿಸಿ ಉಸಿರುಕಟ್ಟಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫಾತಿಮಾಗೆ ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರ ಜೊತೆ ಮದುವೆಯಾಗಿತ್ತು. 2023 ಜು. 7 ರಂದು ಹೆರಿಗೆಯಾಗಿತ್ತು. ಅಬ್ದುಲ್ಲಾ ಹೂದ್ ಎಂಬ ಸುಮಾರು 4ವರೆ ತಿಂಗಳ ಗಂಡು ಮಗು ಇತ್ತು. ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಫಾತಿಮಾಗೆ ಚಿಕಿತ್ಸೆಯನ್ನು ಕೂಡಾ ನೀಡಲಾಗುತ್ತಿತ್ತು. ಈ ನಡುವೆ ಫಾತಿಮಾ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ತಾಯಿ ಬಳಿ ಹೇಳುತ್ತಿದ್ದರು ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1-30 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ನ ಬೆಡ್ ರೂಮ್ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.