ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ರ 3 ನೇ ಅಲೆಯ ಭೀತಿಯನ್ನು ಸಮರ್ಪಕವಾಗಿ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಿ ಕ್ರಮಗಳ ಕುರಿತು ಮಹಾನಗರಪಾಲಿಕೆಯ ವ್ಯಾಪ್ತಿಯ ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ಇಂದು ಸಭೆ ನಡೆಯಿತು.
ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿದ್ದು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಸಭೆಯಲ್ಲಿ ಮಹಾನಗರಪಾಲಿಕೆಯ ಉಪ ಆಯುಕ್ತರು ಆಡಳಿತ ಅಜಿತ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಕಿಶೋರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ|| ಅಶೋಕ್, ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿ ಡಾ|| ಮಂಜಯ್ಯ ಶೆಟ್ಟಿ ಹಾಗೂ ಪಾಲಿಕೆಯ ಕೋವಿಡ್ ಮತ್ತು ಮಲೇರಿಯಾ ನೋಡಲ್ ಅಧಿಕಾರಿ ಡಾ|| ಅಣ್ಣಯ್ಯ ಕುಲಾಲ್, ಡಿ.ಎಸ್.ಒ ಡಾ|| ಕೆ. ಜಗದೀಶ್ ಮತ್ತು ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
# ಮಂಗಳೂರು ನಗರಕ್ಕೆ ಪ್ರವೇಶಿಸುವ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಟೆಸ್ಟನ್ನು ಮಾಡತಕ್ಕದ್ದು,
# ಬಂದು ಏಳು ದಿನ ಕಳೆದ ಕೂಡಲೇ ಮಗದೊಮ್ಮೆ ಆರ್.ಟಿ.ಪಿ.ಸಿ.ಆರ್ ಟೆಸ್ಟನ್ನು ಕಡ್ಡಾಯವಾಗಿ ಮಾಡಲೇಬೇಕು
# ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಜರಗುವ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು 2 ತಿಂಗಳವರೆಗೆ ಮುಂದೂಡಬೇಕು.
• ಕಾಲೇಜುಗಳಲ್ಲಿ ಜರಗುವ ವಿವಿಧ ಕಾರ್ಯಾಗಾರ, ಸಮ್ಮೇಳನ ಹಾಗೂ ವಿಚಾರ ಗೋಷ್ಠಿಯನ್ನು ವರ್ಚುವಲ್ ಮೋಡ್ ಮುಖಾಂತರ ನಡೆಸಬೇಕು.
• ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಒಂದನೇ ಮತ್ತು ಎರಡನೇ ಡೋಸ್ ಕೊರೊನಾ ನಿಯಂತ್ರಣ ಲಸಿಕೆಯನ್ನು ಪಡೆದಿರುವ ಕುರಿತು ಖಚಿತಪಡಿಸಿಕೊಳ್ಳಬೇಕು.
• ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ಸಾರ್ವಜನಿಕರು / ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆ ಮೀರದ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ರಿಪೋರ್ಟನ್ನು ಹಾಜರುಪಡಿಸಬೇಕು.
• ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಬರುವ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಡಿಸಂಬರ್ 12 ರಿಂದ 27ರೊಳಗೆ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಟೆಸ್ಟನ್ನು ಮಾಡಿಸಬೇಕು.
• ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಕೆಲಸ ಅಥವಾ ಶಿಕ್ಷಣ ನಿಮಿತ್ತ ದಿನನಿತ್ಯ ಪ್ರವೇಶಿಸುವವರು 14 ದಿನಗಳಿಗೊಮ್ಮೆ ಆರ್.ಟಿ.ಪಿ.ಸಿ.ಆರ್ ಟೆಸ್ಟನ್ನು ಕಡ್ಡಾಯವಾಗಿ ಮಾಡಿ ನೆಗೆಟಿವ್ ರಿಪೋರ್ಟನ್ನು ಪಡೆಯಬೇಕು.
• ಒಂದು ವೇಳೆ ಯಾವುದೇ ಕಾಲೇಜುಗಳಲ್ಲಿ ಒಮ್ಮಿಂದೊಮ್ಮೆಗೆ ಹಲವಾರು ಮಂದಿಗೆ ಕೊರೊನಾ ಪಾಸಿಟಿವ್ ಬಂದಲ್ಲಿ ಆ ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಯಂತೆ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವುದು ಹಾಗೂ ಅವರೊಂದಿಗೆ ಸಂಪರ್ಕವಿದ್ದ ಕೊರೊನಾ ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳಿಗೆ 7 ದಿನಗಳವರೆಗೆ ಕ್ವಾರಂಟೈನ್‍ನಲ್ಲಿ ಇರಿಸುವಂತೆ ಕ್ರಮಕೈಗೊಂಡು 7 ದಿನಗಳ ನಂತರ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿ ನೆಗೆಟಿವ್ ರಿಪೋರ್ಟನ್ನು ಪಡೆಯಬೇಕು.
• ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಬೇಕು,
• ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಪಿ.ಜಿ ಗಳಲ್ಲಿ ವಾಸ್ತವ್ಯವಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾಯ ಕಾಲೇಜಿನ ಮುಖ್ಯಸ್ಥರು ಪಾಲಿಕೆಗೆ ಕಡ್ಡಾಯವಾಗಿ ನೀಡಬೇಕು.
• ಪ್ರತೀ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾಸ್ಟರ್ ನೋಡಲ್ ಆಫಿಸರ್ ಮತ್ತು ನೋಡಲ್ ಆಫಿಸರನ್ನು ನೇಮಿಸಿ ಕೊರೊನಾಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರು ಅವರ ಕಾಲೇಜು ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು.
• ಬೇರೆ ರಾಜ್ಯಕ್ಕೆ ತೆರಳುವ ವಿದ್ಯಾರ್ಥಿಗಳು ಶಾಲಾ ಕಾಲೇಜು ಮುಖ್ಯಸ್ಥರ ಅನುಮತಿಯನ್ನು ಪಡೆದು ತೆರಳಬೇಕು.
• ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಯಾವುದೇ ಒಂದು ಪ್ರದೇಶದಲ್ಲಿ ಸುಮಾರು 10 ರಿಂದ ಮೇಲ್ಪಟ್ಟು ಮಂದಿ ವ್ಯಾಕ್ಸಿನ್ ಪಡೆಯಲು ಬಾಕಿ ಇದ್ದಲ್ಲಿ, ಈ ಕುರಿತು ಪಾಲಿಕೆಗೆ ಮಾಹಿತಿ ನೀಡಿದ್ದಲ್ಲಿ ಪಾಲಿಕೆ ವತಿಯಿಂದಲೇ ಆ್ಯಂಬುಲೆನ್ಸ್ ಮುಖೇನ ವ್ಯಾಕ್ಸಿನ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.
• ಕೊರೊನಾಕ್ಕೆ ಸಂಬಂಧಿಸಿದಂತೆ ಯಾವುದೇ ಸಹಾಯ ಬೇಕಿದ್ದಲ್ಲಿ ಮಹಾನಗರಪಾಲಿಕೆಯಿಂದ ಅಗತ್ಯ ಸಹಾಯ ನೀಡಲಾಗುವುದು.