ಮಂಗಳೂರು: ನಕಲಿ ಇಮೇಲ್ ಸೃಷ್ಟಿಸಿ ಆ ಮೂಲಕ ಮೆಡಿಕಲ್ ಕಾಲೇಜಿನ ನಿರ್ದೇಶಕರಿಗೆ ಪ್ರಾಂಶುಪಾಲರ ಬಗ್ಗೆ ಆರೋಪ ಮಾಡುತ್ತಿದ್ದ ಹಿನ್ನಲೆಯಲ್ಲಿ ಕಾಲೇಜಿನ ಉಪನ್ಯಾಸಕನೊಬ್ಬನನ್ನು ನಗರ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆಯ ಮೆಡಿಕಲ್ ಕಾಲೇಜಿನ ಉಪನ್ಯಾಸಕ, ಉಳಿಯ ರಾಣಿಪುರ ನಿವಾಸಿ ಡೇವಿಡ್ ರಾಕೇಶ್ ಡಿಸೋಜ (36) ಬಂಧಿತ ಆರೋಪಿ.
ಡೇವಿಡ್ ನಕಲಿ ಇಮೇಲ್ ಐಡಿ ಸೃಷ್ಟಿಸಿ ಪ್ರಾಂಶುಪಾಲರ ವಿರುದ್ಧ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನಾನಾ ವಿಚಾರದಲ್ಲಿ ಆರೋಪ ಹೊರಿಸಿ ಕಾಲೇಜಿನ ನಿರ್ದೇಶಕರಿಗೆ ಇಮೇಲ್ ರವಾನಿಸಿದ್ದ ಎನ್ನಲಾಗಿದೆ.
ನಕಲಿ ಇಮೇಲ್ ಮತ್ತು ನಕಲಿ ಐಡಿ ಆದ ಕಾರಣ ಆರೋಪಿಯ ಪತ್ತೆಯು ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಕಾಲೇಜಿನ ಪ್ರಾಂಶುಪಾಲರು ಆರೋಪಿಯನ್ನು ಪತ್ತೆ ಹಚ್ಚುವಂತೆ ಸೆನ್‌ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಸೆನ್ ಪೊಲೀಸರು ತಂತ್ರಾಂಶವನ್ನು ಬಳಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದರು. ಇದರಲ್ಲಿ ಡೇವಿಡ್ ಕೈವಾಡವಿರುವುದು ಬೆಳಕಿಗೆ ಬರುತ್ತಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.