ಪಾಕಿಸ್ತಾನ- ಚೀನಾ ಪ್ರಬಲ ಬೆದರಿಕೆ; ನಿರ್ಲಕ್ಷ್ಯ ಸಲ್ಲ ಜನರಲ್ ಮನೋಜ್ ಮುಕುಂದ್..!
ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಭಾರತಕ್ಕೆ ಬೆದರಿಕೆ ಒಡ್ಡುತ್ತಿವೆ. ಈ ಬೆದರಿಕೆಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ಎಚ್ಚರಿಸಿದ್ದಾರೆ.
ಸಭಯೊಂದನ್ನುದ್ದೇಶಿಸಿ ಮಾತನಾಡಿದ ಮನೋಜ್ ಮುಕುಂದ್ ಪಾಕಿಸ್ತಾನ ಭಯೋತ್ಪಾದನೆಯನ್ನು ಅಪ್ಪಿಕೊಂಡೇ ಸಾಗುತ್ತಿದೆ. ಆದರೆ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿದೆ.
ಹಲವು ದೇಶಗಳಿಗೆ ಈ ಸಂದೇಶವನ್ನು ಕಳುಹಿಸಿದ್ದೇವೆ ಇದಕ್ಕೆ ನಿಖರ ಪ್ರತ್ಯುತ್ತರ ನೀಡುವ ಹಕ್ಕನ್ನು ಭಾರತ ಹೊಂದಿದೆ. ಹಾಗಾಗಿ ಅದನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಬಳಸುತ್ತೇವೆ ಎಂದು ಹೇಳಿದರು.
2020 ಕೊರೊನಾ ಹಿನ್ನೆಲೆಯಲ್ಲಿ ಬಹಳ ಸಂಕಟದಿಂದ ಕೂಡಿತ್ತು. ಗಡಿಗಳಲ್ಲಿನ ಸಮಸ್ಯೆಯೂ ಉಲ್ಬಣಿಸಿತ್ತು ಇವೆಲ್ಲಾ ಸೇರಿಸಿ ದೊಡ್ಡ ಸವಾಲೇ ಭಾರತಕ್ಕೆದುರಾಗಿತ್ತು. ಈ ಸವಾಲನ್ನು ಭಾರತ ಸಮರ್ಥವಾಗಿ ಎದುರಿಸಿದೆ.
ಚೀನಾ ಗಡಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅವರು, “ಚೀನಾದೊಂದಿಗೆ ಗಡಿ ಸಮಸ್ಯೆ ಕುರಿತು ಶಾಶ್ವತ ಪರಿಹಾರ ಕೈಗೊಳ್ಳಲು ಶಾಂತಿಯುತ ಮಾರ್ಗದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದೇವೆ” ಎಂದು ತಿಳಿಸಿದರು.
ಚೀನಾ ಸೇನೆಯು 10 ಸಾವಿರ ಪಡೆಯೊಂದಿಗೆ ಪೂರ್ವ ಲಡಾಖ್ ನ ಗಡಿ ನಿಯಂತ್ರಣ ರೇಖೆಯಿಂದ ಹಿಂದೆ ಸರಿದಿರುವುದು ಪ್ರಮುಖ ಬೆಳವಣಿಗೆ.
ಆದರೆ ಪೂರ್ವ ಲಡಾಖ್ ನ ಗಡಿ ರೇಖೆ ಬಳಿ ಚೀನಾ ಹಾಗೂ ಭಾರತ ಸೇನೆಯ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಿದರು. ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಸೇನೆ ರೂಪಿಸಲು ಎಲ್ಲಾ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ನೀಲನಕ್ಷೆಯನ್ನು ತಯಾರಿಸಿದ್ದೇವೆ ಎಂದು ಮಾಹಿತಿ ನೀಡಿದರು.