ದೇವಸ್ಥಾನದಲ್ಲಿ ಕಳವುಗೈದ ಕಳ್ಳರು ಮತ್ತೆ ಮಾಡಿದ್ದೇನು..?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಸ್ಥಳೀಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಇಂದು ಬೆಳಕಿಗೆ ಬಂದಿದೆ.
ಮಹಾವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿಯ ಗೋಪುರದಿಂದ ದೇವಳದ ಒಳಾಂಗಣಕ್ಕೆ ಇಳಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿ ದೇವರ ಬೆಳ್ಳಿಯ ಮಾಲೆಯನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಉಳಿದಂತೆ ದೇವಳದ ಕಾಣಿಕೆ ಹುಂಡಿಯನ್ನು ತೆರೆದರೂ ನಿನ್ನೆ ಕಾಣಿಕೆ ಹುಂಡಿ ಲೆಕ್ಕಚಾರ ಆಗಿರುವ ಹಿನ್ನಲೆಯಲ್ಲಿ ಹುಂಡಿಯಿಂದ ಕಳವು ಆಗಿರದ ಬಗ್ಗೆ ಮಾಹಿತಿಯೂ ಲಭ್ಯವಾಗಿದೆ.
ದೇವಳದ ಎದುರಿನ ಅಂಗಡಿಯ ತಿಮ್ಮಪ್ಪ ಗೌಡ ಎಂಬವರ ಅಂಗಡಿಯ ಹಿಂಬದಿಯಿಂದ ಒಳನುಗ್ಗಿದ್ದ ಕಳ್ಳರು ಅಂಗಡಿಯ ಒಳಗೆ ಸ್ವಸಹಾಯ ಸಂಘದ ಸಂಗ್ರಹದ ರೂ.೩೦ ಸಾವಿರ ನಗದು ಮತ್ತು ಇತರ ಚಿಲ್ಲರೆ ಹಣ ಕಳವಾಗಿದೆ.
ಇನ್ನು ಕೆಮ್ಮಾಯಿ ಜಂಕ್ಷನ್ ಬಳಿಯ ಲಿಂಗಪ್ಪ ಹಾಗೂ ಬರ್ನಾಂಡಿಸ್ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದು, ಚಿಲ್ಲರೆ ಹಣ ಕಳವಾಗಿದೆ.
ಇಷ್ಟು ಮಾತ್ರವಲ್ಲದೇ ದೇವಸ್ಥಾನದ ಆವರಣ, ಗರ್ಭ ಗುಡಿಯೊಳಗೆ ಕಿಡಿಗೇಡಿಗಳು ಉಗುಳಿ, ಮಧ್ಯ ಸೇವಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಸಾವಿರಾರು ರೂಪಾಯಿ ಮೌಲ್ಯದ ಸೊತ್ತು ಕಳ್ಳತನವಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.