Saturday, August 20, 2022

ಕತ್ತರಿಸಿದ ಮರಕ್ಕೆ ಪ್ರತಿಯಾಗಿ ಗಿಡ ನೆಟ್ಟ ನಂತರ ಗುತ್ತಿಗೆದಾರನಿಗೆ ಬಿಲ್‌ ಪಾವತಿಸಿ: ಹೈಕೋರ್ಟ್‌ ಆದೇಶ

ಬೆಂಗಳೂರು: ಕಾಮಗಾರಿಗಾಗಿ ಕತ್ತರಿಸುವ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ನೆಟ್ಟ ನಂತರವೇ ಗುತ್ತಿಗೆದಾರನಿಗೆ ಬಿಲ್ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಹೆದ್ದಾರಿ ಅಗಲೀಕರಣಕ್ಕೆ ಮರಗಳ ಕತ್ತರಿಸುವುದನ್ನು ಪ್ರಶ್ನಿಸಿ ಅರುಣ್ ಜಿ. ಮೆಸ್ತಾ ಮತ್ತಿತರರು ಸಲ್ಲಿಸಿರುವ ಪಿಐಎಲ್‌ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ 6,334 ಮರಗಳನ್ನು ಕತ್ತರಿಸಲಿದ್ದು,

ಅದಕ್ಕೆ ಪರಿಹಾರವಾಗಿ ಗಿಡಗಳನ್ನು ನೆಡುವುದಾಗಿ ಭರವಸೆ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮಾಣ ಪತ್ರ ಸಲ್ಲಿಸಿದೆ.

ಅದರಂತೆ ಯೋಜನೆ ಮುಂದುವರಿಸಬಹುದು ಎಂದು ಸೂಚಿಸಿರುವ ಪೀಠ, ಕಾಮಗಾರಿ ನಡೆಸುವ ಜೊತೆಯಲ್ಲೇ ಪರಿಹಾರ ರೂಪದಲ್ಲಿ ಗಿಡಗಳನ್ನು ನೆಡಬೇಕು ಎಂದು ಆದೇಶಿಸಿದೆ.
ಅಲ್ಲದೆ, ಕತ್ತರಿಸಿದ ಮರಗಳಿಗೆ ಪ್ರತಿಯಾಗಿ ಗಿಡಗಳನ್ನು ನೆಟ್ಟ ನಂತರವೇ ಗುತ್ತಿಗೆದಾರನಿಗೆ ಬಿಲ್ ಬಿಡುಗಡೆ ಮಾಡಬೇಕು.

ಅರಣ್ಯ ಇಲಾಖೆ ವಿಧಿಸಿರುವ ಷರತ್ತುಗಳ ಅನ್ವಯ ಗಿಡ ನೆಡುವ ಕೆಲಸ ನಡೆದಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ದೃಢೀಕರಣ ಪತ್ರ ವಿತರಿಸಬೇಕು.

ಈ ಪ್ರಗತಿ ವರದಿಯನ್ನು ಹೆದ್ದಾರಿ ಪ್ರಾಧಿಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಒಂದು ವೇಳೆ ಅರಣ್ಯ ಇಲಾಖೆಯ ಅನುಮತಿ ಪ್ರಕಾರ ಅರಣ್ಯೀಕರಣ ನಡೆಸದಿದ್ದರೆ ಆ ಕುರಿತು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತರಬಹುದು ಎಂದು ನಿರ್ದೇಶಿಸಿ ವಿಚಾರಣೆಯನ್ನು 2 ತಿಂಗಳ ಕಾಲ ಮುಂದೂಡಿದೆ.
ಪ್ರಕರಣದ ಹಿನ್ನೆಲೆ
ಕುಮಟಾ ಮತ್ತು ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 6 ಕಿಲೋ ಮೀಟರ್ ರಸ್ತೆಯನ್ನು ನಾಲ್ಕು ಪಥದೊಂದಿಗೆ ಅಗಲೀಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ಹಮ್ಮಿಕೊಂಡಿದೆ. ಈ ಯೋಜನೆಗೆ ಮರಗಳನ್ನು ಕತ್ತರಿಸುವುದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

LEAVE A REPLY

Please enter your comment!
Please enter your name here

Hot Topics