ಮಂಗಳೂರು: ಬಿಸಿಲ ಧಗೆ ನಿಧಾನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ನಾನಾ ಕಡೆ ಮಂಗಳವಾರದಿಂದ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ 14ರಿಂದ 18ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಹಾಗೂ ಮಾರ್ಚ್ 16ರಿಂದ 18ರವರೆಗೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಫ್ಫಳ ಜಿಲ್ಲೆಯ ಕೆಲವು ಕಡೆ ಮಾರ್ಚ್ 16ರಿಂದ ಮಾರ್ಚ್ 18ರವರೆಗೆ ಮಳೆ ಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾರ್ಚ್ 17ಮತ್ತು 18ರಂದು ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕಾರವಾರದಲ್ಲಿ ಸೋಮವಾರ ಗರಿಷ್ಠ 37.1 ಡಿಗ್ರಿ ಸೆಲ್ಸೀಯಸ್ ಹಾಗೂ ಬಾಗಲಕೋಟೆಯಲ್ಲಿ ಕನಿಷ್ಠ 14 ಡಿಗ್ರಿ ತಾಪಮಾನ ದಾಖಲಾಗಿದೆ.