ಉಡುಪಿ: ‘ಕಳೆದ ಹತ್ತು ದಿನಗಳಿಂದ ಉಡುಪಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. 7 ಮನೆಗಳು ಕುಸಿದಿವೆ. 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರತಿ ವರ್ಷ ಸಮುದ್ರ ಜಮೀನನ್ನು ಕೊರೆಯುತ್ತಿದೆ.
ಕಡಲ್ಕೊರೆತ ತಡೆಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ . ಹೀಗಿದ್ದರೂ ಹಲವು ಕಡೆಗಳಲ್ಲಿ ನೀರು ನುಗ್ಗಿದೆ. ಶಾಶ್ವತವಾದ ತಡೆಗೋಡೆ ನಿರ್ಮಾಣ ಆಗಬೇಕಿದೆ. ಅಧಿಕಾರಿಗಳು ಸಿಆರ್‌ಝುಡ್ ಸಮಸ್ಯೆ ಇರುವ ಕಾರಣ ಕೆಲವು ಕೆಲಸಗಳು ಬಾಕಿ ಇದೆ ಎನ್ನುತ್ತಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿ ಜಿಲ್ಲೆಯ ಕಾಪುವಿನ ಮೂಳೂರು ಪ್ರದೇಶದ ಕಡಲ್ಕೊರೆತ, ಕೃಷಿ ಹಾನಿಯಾದ ಸ್ಥಳಕ್ಕೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ‘ಉಡುಪಿ ಜಿಲ್ಲೆಯಲ್ಲಿ ಸುಮಾರು 30 ಕೋಟಿ ಹಾನಿ ಉಂಟಾಗಿದೆ.
ಇದಕ್ಕೆ ಬೇಕಾದ ಹಣ ನೀಡುವಲ್ಲಿ ಸಿಎಂ ಹಾಗೂ ಕಂದಾಯ ಸಚಿವರಲ್ಲಿ ಈಗಾಗಲೇ ಮಾತನಾಡಿದ್ದೇನೆ. ಪ್ರತೀ ವರ್ಷ ಇದಕ್ಕೆ ಹಣದ ಕೊರತೆ ಕೂಡಾ ಆಗುತ್ತಿದೆ. ಇದಕ್ಕೆ ಶಾಶ್ವತವಾಗಿ ಪರಿಹಾರ ಆಗಬೇಕಿದೆ. ಸರ್ಕಾರ ಅದರ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಹಂತ ಹಂತವಾಗಿ ಹಣ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಾಪು ತಾಲೂಕಿನ ಮುಳೂರು ಭಾಗಕ್ಕೆ ಭೇಡಿ ನೀಡಿದ ಶೋಭಾ, ಅಲ್ಲಿನ ಜನತೆಯ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಜನತೆಗೆ ಧೈರ್ಯ ತುಂಬಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ, ಶಾಶ್ವತ ಪರಿಹಾರ ಕಲ್ಪಿಸುವ ಆಶ್ವಾಸನೆ ನೀಡಿದರು.