ನವದೆಹಲಿ: ದೇಶಕ್ಕೆ ಭ್ರಷ್ಟನಾಗಿ ಹಾಗೂ ಆರ್ಥಿಕ ಅಪರಾಧಿಯಾಗಿರುವ ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದಂಡಸಮೇತ ಶಿಕ್ಷೆ ವಿಧಿಸಿದೆ.
ನ್ಯಾಯಾಲಯವು ವಿಜಯ ಮಲ್ಯಗೆ 4 ತಿಂಗಳ ಜೈಲು ಶೀಕ್ಷೆ ಹಾಗೂ 2000 ದಂಡ ವಿಧಿಸಿದೆ.
2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಪ್ರಕರಣದಲ್ಲಿ ನೀಡಿದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರು ತಮ್ಮ ಮಕ್ಕಳಿಗೆ 40 ಮಿಲಿಯನ್ ಯು.ಎಸ್ ಡಾಲರ್ ವರ್ಗಾವಣೆ ಮಾಡಿದ ಆರೋಪದಲ್ಲಿ ಮಲ್ಯಗೆ ಶಿಕ್ಷೆ ವಿಧಿಸಲಾಗಿತ್ತು.
ಇಂದು ನ್ಯಾಯಾಲಯ ‘ಮಲ್ಯ ತಮ್ಮ ವರ್ತನೆಯ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸದೆ ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲೂ ಇಲ್ಲ’ ಎಂದು ಹೇಳಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ಕೋರ್ಟ್ ವಿಧಿಸಿದ ದಂಡದ ಮೊತ್ತವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂಕೋರ್ಟ್ ಕಾನೂನು ಸೇವಾ ಪ್ರಾಧಿಕಾರಕ್ಕೆ ಠೇವಣಿ ಮಾಡಬೇಕು. ತಪ್ಪಿದಲ್ಲಿ ಎರಡು ತಿಂಗಳ ಶಿಕ್ಷೆಯನ್ನು ಹೆಚ್ಚಿಸಲಾಗುವುದು. ಮಲ್ಯ ಅವರ ಕುಟುಂಬ ಸದಸ್ಯರಿಗೆ ಮುಂದಿನ ನಾಲ್ಕು ವಾರಗಳಲ್ಲಿ 40 ಮಿಲಿಯನ್ ಡಾಲರ್ಗಳಿಗೆ ಶೇ.8ರಷ್ಟು ಬಡ್ಡಿಯಂತೆ ಹಣವನ್ನು ಹಿಂತಿರುಗಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ಒಂದು ವೇಳೆ ವಿಫಲವಾದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ.ಎಸ್ ನರಸಿಂಹ ಅವರು ಮಾರ್ಚ್ 10 ರಂದು ಶಿಕ್ಷೆಯ ಆದೇಶವನ್ನು ಕಾಯ್ದಿರಿಸಿದ್ದರು.
ಬ್ರಿಟನ್ನಲ್ಲಿ ನೆಲೆಸಿರುವ ಮಲ್ಯರನ್ನು ಗಡಿಪಾರು ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಅವರ ಅನುಪಸ್ಥಿತಿಯಲ್ಲೇ ಇಂದು ವಿಚಾರಣೆ ಮುಂದುವರೆಯಿತು.