Friday, March 31, 2023

ಗುಳಿಗನಿಗೆ ಅವಮಾನಿಸಿದ ಅರಗ ಜ್ಞಾನೇಂದ್ರ ಕ್ಷೇತ್ರಕ್ಕೆ ಬಂದು ಕ್ಷಮೆಯಾಚಿಸಲಿ: ನಲಿಕೆ ಸಮಾಜ ಸಂಘ

ಮಂಗಳೂರು: ತುಳುನಾಡಿನ ಭೂತಕೋಲಕ್ಕೆ ಬಿಜೆಪಿ ಸಚಿವ ಅರಗ ಜ್ಞಾನೇಂದ್ರ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯಲ್ಲಿ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಅವಮಾನ ಮಾಡಿರುವುದನ್ನು ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘ ಖಂಡಿಸಿದೆ.


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ, ತುಳುನಾಡಿನ ಆರಾಧನೆಯಲ್ಲಿ ಒಂದಾದ ಭೂತಕೋಲಕ್ಕೆ ಗೃಹ ಸಚಿವ ಅರಗ ಅವಮಾನ ಮಾಡಿದ್ದಾರೆ.

ಗುಳಿಗ ದೈವಕ್ಕೆ ಗುಳಿಗ, ಜಪಾಳ್ ಗುಳಿಗ ಅಂತಾ ಇವರ ನಾಟಕ ಎಂದು ಹೇಳಿ ದೈವಾರಾಧಕರು ಮತ್ತು ತುಳುನಾಡಿನ ಭಕ್ತರಿಗೆ ಅವಮಾನ ಮಾಡಿದ್ದಾರೆ.

ಈ ಕೂಡಲೇ ಸಚಿವ ಅರಗ ಜ್ಞಾನೆಂದ್ರ ಅವರು ಕರಾವಳಿಯಲ್ಲಿರುವ ಯಾವುದೇ ಗುಳಿಗ ಸಾನಿಧ್ಯಕ್ಕೆ ಬಂದು ಕ್ಷಮೆ ಯಾಚನೆ ಮಾಡಬೇಕು. ನಲಿಕೆಯವರ ಬಳಿಯೂ ಕ್ಷಮೆ ಯಾಚನೆ ಮಾಡಬೇಕು.

ಅವರು ಕ್ಷಮೆ ಯಾಚನೆ ಮಾಡಲು ನಾವು ಒಂದು ವಾರಗಳ ಗಡುವು ನೀಡುತ್ತೇವೆ. ಮುಂದಿನ ದಿನ ಅವರು ಮಂಗಳೂರಿಗೆ ಬರುವಾಗ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ.

ಮಾತ್ರವಲ್ಲದೇ ಘೇರಾವ್‌ ಹಾಕುತ್ತೇವೆ ಎಂದು ಎಚ್ಚರಿಸಿದರು. ಬಿಜೆಪಿಯಲ್ಲಿರುವ ಕೆಲವು ನಾಯಕರಾದ ಅಶ್ವಥ್ ನಾರಾಯಣ, ಮಾಧುಸ್ವಾಮಿ, ಸಿ.ಟಿ ರವಿ ಹೀಗೆ ಹಿಂದುತ್ವವನ್ನು ಅವಹೇಳನ ಮಾಡುತ್ತಿದ್ದಾರೆ. ಕಾಂತಾರ ಸಿನೆಮಾದ ಬಳಿಕ ದೈವಾರಾಧನೆಗೆ ಎಲ್ಲಾ ಸಭೆ, ಸಮಾರಂಭಗಳಲ್ಲಿ ಅವಮಾನ ಆಗುತ್ತಿದೆ.

ಇತ್ತೀಚೆಗೆ ನಡೆದ ಭೂತಕೋಲದಲ್ಲಿ ಸ್ವಾಮೀಜಿಯೊಬ್ಬರು ಭೂತಕ್ಕೆ ಹೂಮಾಲೆ ಹಾಕುವ ಸಂದರ್ಭ ಅದನ್ನು ಎಸೆಯುವ ಮೂಲಕ ಅವಮಾನ ಮಾಡಿದ್ದಾರೆ. ದೈವನರ್ತಕರಿಗೆ 2000 ರೂಪಾಯಿ ಪಿಂಚಣಿ ನೀಡುವುದಾಗಿ ಹೇಳಿದ್ದ ಬಿಜೆಪಿ ಸರಕಾರ ಐದು ತಿಂಗಳು ಕಳೆದರೂ ಇದುವರೆಗೆ ಯಾರಿಗೂ ಪಿಂಚಣಿ ಸಿಕ್ಕಿಲ್ಲ. ಈ ಮೂಲಕ ದೈವ ನರ್ತಕರಿಗೆ ಅವಮಾನ ಮಾಡಿದ್ದಾರೆ.

ದೈವದೇವರಿಗೆ ಅವಹೇಳನ ಮಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ನಿಲ್ಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಒಡಿನಾಳ, ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ದೈವಾರಾಧನ ಸಮಿತಿ ಅಧ್ಯಕ್ಷ ಜನಾರ್ದನ ಬಳ್ಳಮಂಜ, ಮಾಜಿ ಕಾರ್ಯದರ್ಶಿ ಅನಂತ ಮುಂಡಾಜೆ, ಮಾಜಿ ಯುವವೇದಿಕೆ ಅಧ್ಯಕ್ಷ ರವಿ ಎಂ ಎಲ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics