ಬೆಂಗಳೂರು: ಅಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಹಿನ್ನೆಲೆ ಆ ದಿನಗಳು ಖ್ಯಾತಿಯ ನಟ ಚೇತನ್‌ನನ್ನು ನಿನ್ನೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಟ ಚೇತನ್ ಗೆ 8ನೇ ಎಸಿಎಂಎಂ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗಾಗಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನಟ ಚೇತನ್ ಫೆಬ್ರವರಿ 16 ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ಜಡ್ಜ್ ಒಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ.
ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಎಫ್ಐಆರ್ ದೂರು ದಾಖಲಿಸಿಕೊಂಡಿದ್ದರು. ಬಳಿಕ ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಎಫ್ಐಆರ್ ( FIR – Cr No40/2022) ದಾಖಲಿಸಿದ್ದಾರೆ.
ಇತ್ತೀಚೆಗೆ ಯಾವಾಗಲೂ ವಿವಾದ ಹಬ್ಬಿಸುವ ಮೂಲಕ, ಟೀಕೆಗಳ ಮೂಲಕವೇ ಸುದ್ದಿಯಾಗುವ ನಟ ಚೇತನ್ ಈ ಮೊದಲು ಕೂಡ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಇದರ ಬಗ್ಗೆ ನಿನ್ನೆ ಅವರ ಪತ್ನಿ ಮೇಘಾ ಫೇಸ್ಬುಕ್ ಲೈವ್ ಬಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದರು.
‘ನನ್ನ ಪತಿಯ ಅಪಹರಣವಾಗಿದೆ’ ಎಂದು ಹೇಳಿಕೊಂಡಿದ್ದರು. ನಂತರ ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ.
ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ. ಯಾವುದೇ ಆಕ್ಷೇಪಾರ್ಹ ಪದಗಳನ್ನ ಬಳಸಿ ಚೇತನ್ ಮಾತನಾಡಿಲ್ಲ. ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಷ್ಟೇ ಅಲ್ಲದೆ ಮೇಘಾ ಚೇತನ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ. ನೇರವಾಗಿ ಬಂದು ಚೇತನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಚೇತನ್ ಎಲ್ಲಿದ್ದಾರೆ ಎಂದೂ ಹೇಳುತ್ತಿಲ್ಲ.
ಇದೊಂದು ರೀತಿ ಕಿಡ್ನ್ಯಾಪ್ ಮಾಡಿದಂತೆ. ನಮಗೆ ಅನ್ಯಾಯ ಆಗಿದೆ. ಪೊಲೀಸ್ ಆದರೂ ನಮಗೆ ಮಾಹಿತಿ ನೀಡಬಹುದಿತ್ತು. ಅದನ್ನೂ ಮಾಡುತ್ತಿಲ್ಲ’ ಎಂದು ಮೇಘಾ ಆರೋಪಿಸಿದ್ದರು.
ನ್ಯಾಯಾಧೀಶರಿಗೆ ನಿಂದಿಸಿದ ಆರೋಪ ಪ್ರಕರಣದಡಿ ಬಂಧನ ನಡೆದಿದೆ. ಸ್ವಯಂಪ್ರೇರಿತ ಕೇಸ್ ದಾಖಲಿಸಿ ನಟ ಚೇತನ್‌ನನ್ನು ಬಂಧಿಸಿದ್ದೇವೆ’ ಎಂದು ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಸ್ಪಷ್ಟನೆ ನೀಡಿದರು.