ಅಬುಧಾಬಿ: ಯುಎಇ ಅಧ್ಯಕ್ಷ, ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ನಿಧನ ಹಿನ್ನೆಲೆ ಭಾರತದಲ್ಲಿ ಒಂದು ದಿನದ ಶೋಕಾಚರಣೆ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದಲ್ಲೂ ಇಂದು ಶೋಕಾಚರಣೆ ನಡೆಯಲಿದೆ.
ಶೇಖ್ ಖಲೀಫಾ ಅವರಿಗೆ 73 ವರ್ಷ ವಯಸ್ಸಾಗಿತ್ತು. ಇವರು ಯುಎಇ ಅಧ್ಯಕ್ಷ, ಅಬುಧಾಬಿಯ ಆಡಳಿತಗಾರರಾಗಿ ನವೆಂಬರ್ 3, 2004 ರಿಂದ ಸೇವೆ ಸಲ್ಲಿಸುತ್ತಿದ್ದರು.
ಶೇಖ್ ಖಲೀಫಾ ತಮ್ಮ ತಂದೆ ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು.
ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು 1971 ರಲ್ಲಿ ಒಕ್ಕೂಟದಿಂದ ಯುಎಇಯ ಮೊದಲ ಅಧ್ಯಕ್ಷರಾಗಿ ನವೆಂಬರ್ 2, 2004 ರಂದು ನಿಧನರಾಗುವವರೆಗೆ ಸೇವೆ ಸಲ್ಲಿಸಿದರು.
1948 ರಲ್ಲಿ ಜನಿಸಿದ ಶೇಖ್ ಖಲೀಫಾ ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರರಾಗಿದ್ದರು.
ಅವರು ಶೇಖ್ ಜಾಯೆದ್ ಅವರ ಹಿರಿಮಗ.
ಯುಎಇ ಅಧ್ಯಕ್ಷರಾದಾಗಿನಿಂದ ಶೇಖ್ ಖಲೀಫಾ ಅವರು ಫೆಡರಲ್ ಸರ್ಕಾರ ಮತ್ತು ಅಬುಧಾಬಿ ಸರ್ಕಾರದ ಪ್ರಮುಖ ಪುನರ್ರಚನೆಯ ಮುಂದಾಳತ್ವ ವಹಿಸಿದ್ದಾರೆ.
ಅವರ ಆಳ್ವಿಕೆಯಲ್ಲಿ, ಯುಎಇ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಯಿತು.
ಶೋಕಾಚರಣೆ ಹಿನ್ನೆಲೆ ಕರ್ನಾಟಕದ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಲಿದೆ.