ಬಂಟ್ವಾಳ: ಹಿರಿಯ ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಯ ಸಂದರ್ಭ ‘ಹಿಂದುತ್ವವನ್ನು ಅವಹೇಳನ ಮಾಡಿದ ಅನಂತಮೂರ್ತಿ ಆಯಿತು,
ಈಗ ಎಂ.ಎಂ. ಕಲ್ಬುರ್ಗಿ, ಮುಂದೆ ಕೆ.ಎಸ್. ಭಗವಾನ್’ ಎಂಬುದಾಗಿ ಟ್ವೀಟ್ ಮಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆ ಗೊಳಿಸಿ ತೀರ್ಪು ನೀಡಿದೆ.
ಬಿ. ಮೂಡ ಗ್ರಾಮದ ಮೊಡಂಕಾಪು ಸಮೀಪದ ಪಲ್ಲಮಜಲು ನಿವಾಸಿ ಭುವಿತ್ ಯಾನೆ ಭುವಿತ್ ಶೆಟ್ಟಿ (25) ಪ್ರಕರಣದಿಂದ ಖುಲಾಸೆಯಾದ ಆರೋಪಿ.
2015ರ ಆ.30ರಂದು ಚಿಂತಕ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆ ನಡೆದಿತ್ತು. ಈ ಸಂದರ್ಭ ಭುವಿತ್ ಯಾನೆ ಭುವಿತ್ ಶೆಟ್ಟಿ ತನ್ನ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟೀಟ್ ಮಾಡಿದ್ದಾಗಿ ಆರೋಪಿಸಲಾಗಿತ್ತು. ಈ ವಿಚಾರವು ಜಿಲ್ಲೆ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಚರ್ಚೆಗೂ ಕಾರಣವಾಗಿತ್ತು.
ಆಗ ಬಂಟ್ವಾಳ ನಗರ ಪೊಲೀಸರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆರೋಪಿಯ ವಿರುದ್ಧ ಕೇಸನ್ನು ದಾಖಲಿಸಿದ್ದರು.
ನಂತರ ಬಂಟ್ವಾಳ ನಗರ ಠಾಣೆಯ ಎಸ್‌ಐ ಆಗಿದ್ದ ನಂದಕುಮಾರ್ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಶಿಲ್ಪಾ ಜಿ. ತಿಮ್ಮಾಪುರ ಅವರು ವಾದ ಪ್ರತಿವಾದವನ್ನು ಆಲಿಸಿ ಆರೋಪಿ ಭುವಿತ್ ಶೆಟ್ಟಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಈ ಪ್ರಕರಣ ನ್ಯಾಯಾಲಯದ ವಿಚಾರಣಾ ಹಂತದಲ್ಲು ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಆರೋಪಿ ಪರವಾಗಿ ಬಿ.ಸಿ.ರೋಡ್‌ನ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಪಿ. ಹಾಗೂ ಶುಭಲತಾ ವಾದಿಸಿದ್ದರು