ಬೆಂಗಳೂರು: ಕನ್ನಡ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ನಟಿಸಿದ್ದ ‘ಸಾಕ್ಷಾತ್ಕಾರ’ ಖ್ಯಾತಿಯ ಹಿರಿಯ ನಟಿ ಜಮುನಾ ಅವರು ಇಂದು ಹೈದರಾಬಾದ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಸತ್ಯಭಾಮ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದು ಅವರು ಗುರುತಿಸಲ್ಪಟ್ಟಿದ್ದರು. 1936 ಆಗಸ್ಟ್ 30 ರಂದು ಕರ್ನಾಟಕದ ಹಂಪಿಯಲ್ಲಿ ಜನಿಸಿದ್ದ ಜಮುನಾ 1953 ರಲ್ಲಿ ‘ಪುಟ್ಟಿಲ್ಲು’ ಎನ್ನುವ ಸಿನಿಮಾದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
1965ರಲ್ಲಿ ಪ್ರೊಫೆಸರ್ ಜುಲುರಿ ರಮಣರಾವ್ ಅವರನ್ನು ವಿವಾಹವಾಗಿದ್ದರು. 2014 ರಲ್ಲಿ ಪತಿ ಮೃತ ಪಟ್ಟಿದ್ದರು. ಜಮುನಾ ಅವರು ತೆಲುಗು ಭಾಷೆಯಲ್ಲೇ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದಾರೆ.
ಹಿರಿಯ ಸ್ಟಾರ್ ನಟರಾದ ತೆಲುಗಿನ ಎನ್ಟಿಆರ್, ಎಎನ್ಆರ್, ಕನ್ನಡದ ಡಾ। ರಾಜಕುಮಾರ್ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು.
ಕನ್ನಡದಲ್ಲಿ ಸಾಕ್ಷಾತ್ಕಾರ, ರತ್ನಗಿರಿ ರಹಸ್ಯ, ಭೂ ಕೈಲಾಸ, ಪೋಲಿಸ್ ಮತ್ತು ದಾದಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಭಿನಯಿಸಿದ್ದರು. ಕನ್ನಡ, ತೆಲುಗು, ತಮಿಳು ಮತ್ತಿತರ ಭಾಷೆಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಿರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ.
ಅವರ ನಟನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ರಾಜಕೀಯದಲ್ಲೂ ತೊಡಗಿಸಿಕೊಂಡು 80ರ ದಶಕದಲ್ಲಿ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡು ರಾಜಮಂಡ್ರಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು.