ಮುಂಬೈ: ದೇಶ-ವಿದೇಶದೆಲ್ಲೆಡೆ ವಾದ ವಿವಾದಗಳನ್ನು ಸೃಷ್ಠಿಸಿ ಪ್ರತಿಯೊಬ್ಬ ನಾಗರಿಕನೂ ಒಮ್ಮೆ ತನ್ನತ್ತ ನೋಡುವಂತೆ ಮಾಡಿದ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’. ಇದೀಗ ಅದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಮ್ಮೆ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಇವರು ಕೊರೊನಾ ವ್ಯಾಕ್ಸಿನ್ ಕುರಿತು ಸಿನಿಮಾ ಮಾಡಲಿದ್ದು, ಅದಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಹೆಸರಿಟ್ಟಿದ್ದಾರೆ.
ಇವರು ರಚಿಸಿ ತಯಾರಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್‌ನಲ್ಲಿ 340 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು.
ಇದೀಗ ವಿವೇಕ್ ಅಗ್ನಿಹೋತ್ರಿ ಅವರ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ತೆರೆಗೆ ಬರಲಿದೆ. 2023ರ ಆಗಸ್ಟ್ 15ರಂದು ಈ ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮಾತನಾಡಿರುವ ಅವರು, ‘ನಮ್ಮ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಕೋವಿಡ್ ಕಾರಣದಿಂದ ಮುಂದೂಡಿಕೆಯಾದಾಗ, ನಾನು ಈ ವ್ಯಾಕ್ಸಿನ್ ಕುರಿತಂತೆ ಸಂಶೋಧನೆ ಶುರು ಮಾಡಿದ್ದೆ. ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲಾಗಿದೆ.
ಈ ವ್ಯಾಕ್ಸಿನ್ ತಯಾರಿಕೆಯಲ್ಲಿ ನಮ್ಮ ವಿಜ್ಞಾನಿಗಳ ಶ್ರಮ, ತ್ಯಾಗ ಬಗ್ಗೆ ಹೇಳಲಿದ್ದೇವೆ. ನಾವು ಅತಿವೇಗದ, ಅಗ್ಗದ ಮತ್ತು ಸುರಕ್ಷಿತವಾದ ಲಸಿಕೆಯನ್ನು ತಯಾರಿಸುವ ಮೂಲಕ ಮಹಾಶಕ್ತಿಗಳ ವಿರುದ್ಧ ಗೆದ್ದಿದ್ದೇವೆ.
ಪ್ರತಿಯೊಬ್ಬ ಭಾರತೀಯನು ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತಹ ಈ ಕಥೆಯನ್ನು ಹೇಳಬೇಕು ಎಂದು ನಾನು ಭಾವಿಸಿದೆ. ಇದು ನಮಗೆ ತಿಳಿದಿರದ ಜೈವಿಕ ಯುದ್ಧದ ಬಗ್ಗೆ ಭಾರತದ ಮೊದಲ ಶುದ್ಧ ವಿಜ್ಞಾನ ಸಿನಿಮಾವಾಗಿದೆ’ ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ, ಪಲ್ಲವಿ ಜೋಷಿ ಅವರೇ ಈ ಸಿನಿಮಾಕ್ಕೆ ಪ್ರೊಡಕ್ಷನ್ ಮಾಡುತ್ತಿದ್ದಾರೆ. I Am Buddha ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ.
ಅಭಿಷೇಕ್ ಅಗರ್‌ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ವಿಶ್ವಾದ್ಯಂತ ವಿತರಣೆ ಮಾಡಲಾಗುತ್ತಿದೆ. ಆದರೆ ಈವರೆಗೂ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.