ತುಮಕೂರು: ಮೂಢನಂಬಿಕೆಗೆ ಒಳಗಾಗಿ ಬೇರೆಯಾಗಿದ್ದ ಜೋಡಿಯನ್ನು ನ್ಯಾಯಾಧೀಶರು ಒಂದು ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮರೆನಾಡು ಗ್ರಾಮದ ಪಾರ್ವತಮ್ಮ, ಹಂದನಕೆರೆ ಹೋಬಳಿಯ ಮಂಜುನಾಥ್ ದಂಪತಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪನವರ ಮುಂದೆ ತಮ್ಮ ವಿಚ್ಛೇದನಾ ಅರ್ಜಿಯ ವಿಚಾರಣೆಗೆ ಹಾಜರಾಗಿದ್ದರು.
ಮೂಢನಂಬಿಕೆಗೆ ಒಳಗಾಗಿ ಹೆಂಡತಿಯನ್ನು ಬಿಡುವಂತೆ ದೇವರು ಹೇಳಿದ್ದಾರೆ ಎಂದು ಮಂಜುನಾಥ್ ಪತ್ನಿ ಪಾರ್ವತಮ್ಮಗೆ ವಿಚ್ಛೇದನ ನೀಡಲು ಮುಂದಾದ ಬಗ್ಗೆ ನ್ಯಾಯಾಧೀಶರ ಬಳಿ ಹೇಳಿಕೊಂಡಿದ್ದಾರೆ.
ಬಳಿಕ ಈ ಬಗ್ಗೆ ದಂಪತಿಗೆ ಚಿಕ್ಕನಾಯಕನಹಳ್ಳಿ ನ್ಯಾಯಾಲಯದ ನ್ಯಾಯಾಧೀಶರು ತಿಳುವಳಿಕೆ ಮಾತುಗಳನ್ನು ಹೇಳಿದರು.
ನ್ಯಾಯಾಧೀಶರ ಬುದ್ಧಿ ಮಾತು ಕೇಳಿದ ದಂಪತಿ ಒಂದಾಗಿದ್ದಾರೆ.
ಮನಸ್ತಾಪವನ್ನು ಮರೆತು ನ್ಯಾಯಾಧೀಶರ ಮಾತಿಗೆ ಬೆಲೆಕೊಟ್ಟು ಮತ್ತೆ ಒಂದಾದ ಜೋಡಿ ನ್ಯಾಯಾಲಯದಲ್ಲಿ ಹಾರ ಬದಲಾಯಿಸಿದರೆ ವಕೀಲರು , ನ್ಯಾಯಾಲಯದ ಸಿಬಂದಿ ಶುಭ ಹಾರೈಸಿದರು.