Connect with us

LATEST NEWS

ಉಡುಪಿಯಲ್ಲಿ  ಕೊಡಲಿ ಏಟಿನಿಂದ ರೋಧಿಸುತ್ತಿರುವ ಮರಗಳು; ಅರಣ್ಯಾಧಿಕಾರಿಗಳಿಂದಲೇ ಮರಗಳ ಮಾರಣಹೋಮ..! 

Published

on

ಉಡುಪಿಯಲ್ಲಿ  ಕೊಡಲಿ ಏಟಿನಿಂದ ರೋಧಿಸುತ್ತಿರುವ ಮರಗಳು; ಅರಣ್ಯಾಧಿಕಾರಿಗಳಿಂದಲೇ ಮರಗಳ ಮಾರಣಹೋಮ..!

ಉಡುಪಿ: ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮರವನ್ನು ಹುಡುಕುತ್ತಾರೆ. ಆದರೆ ಆ ಮರಗಳನ್ನೇ ನಿರ್ದಾಕ್ಷಿಣ್ಯವಾಗಿ ಕಡಿಯೋದಕ್ಕೆ ಮುಂದಾಗಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಇಲ್ಲಿ ಮರ ಕಡಿಯುತ್ತಿರುವುದೇನೂ ಅಕ್ರಮವಲ್ಲ. ಎಲ್ಲವೂ ಸಕ್ರಮವೇ, ಆದರೆ ಮನುಷ್ಯನ ಅಭಿವೃದ್ಧಿಯ ನಾಗಾಲೋಟಕ್ಕೆ ಜಿಲ್ಲೆಯ ಹಸಿರುರಾಶಿ ಬಲಿಯಾಗುತ್ತಿರುವುದು ದುರಂತವೇ ಸರಿ

ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಪೇತ್ರಿಗೆ ಹೋಗುವ ಮಾರ್ಗದಲ್ಲಿ ಸಾಲು ಸಾಲು ಮರಗಳು ಧರೆಗುರುಳುತ್ತಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 1014 ಮರಗಳು ನೆಲಕ್ಕುರುಳಲಿವೆ.

.ಬ್ರಹ್ಮಾವರ ಮತ್ತು ಪೇತ್ರಿ ಪರಿಸರ ಉತ್ತಮ ಗ್ರಾಮೀಣ ಜೀವನ ಮತ್ತು ಹಸಿರು ರಾಶಿಯಿಂದ ಕಂಗೊಳಿಸುವ ಪ್ರದೇಶವಾಗಿದೆ. ಬದಲಾದ ಕಾಲಘಟ್ಟದಲ್ಲಿ ರಸ್ತೆಗಳ ಅಗಲೀಕರಣದ ಅಗತ್ಯವಿದೆ.

ಆದರೆ, ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡೋದು ಯಾರಿಗೂ ಬೇಡ, ಹಾಗಾಗಿ ಮುಲಾಜಿಲ್ಲದೆ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ.

ಈ ದಾರುಣ ದೃಶ್ಯ ಕಂಡ ಕೆಲ ಸ್ಥಳೀಯ ಯುವಕರು ಮುಂದೆ ಬಂದು ವಿರೋಧಿಸಿದ್ದು ಬಿಟ್ಟರೆ, ಮರ ಕೆಡಹುವ ಕಾರ್ಯವಂತೂ ಸುಸೂತ್ರವಾಗಿಯೇ ಸಾಗಿದೆ.

ಬ್ರಹ್ಮಾವರ ತಾಲೂಕು ಕೇಂದ್ರದಿಂದ ಪೇತ್ರಿ ವರೆಗಿನ ಒಟ್ಟು 13 ಕಿಮೀ ರಸ್ತೆ ಅಗಲೀಕರಣವಾಗುತ್ತಿದೆ,. ಹಿರಿಯ ತಲೆಮಾರಿನಜನ ಓಡಾಡುವ ಜನರಿಗೆ ನೆರಳಿನ ಜೊತೆ ಫಲವಸ್ತುಗಳೂ ತಿನ್ನಲು ಸಿಗಲಿ ಎಂದು ಹೇರಳವಾಗಿ ಮಾವು, ಹಲಸಿನ ಮರಗಳನ್ನೇ ಇಲ್ಲಿ ಬೆಳೆಸಿದ್ದಾರೆ.

ಸಾಕಷ್ಟು ಔಷಧೀಯ ವೃಕ್ಷಗಳೂ ಇವೆ. ದಶಕಗಳಿಂದ ಜನರಿಗೆ ನೆಮ್ಮದಿಯ ನೆರಳುಕೊಟ್ಟ ಮರಗಳಿವು. ಆದರೆ ಮನುಷ್ಯನ ಕೃತಘ್ನತೆಗೆ ಏನು ಹೇಳಬೇಕೋ ಗೊತ್ತಿಲ್ಲ.

ವರ್ಷದ ಹಿಂದೆ ಪಬ್ಲಿಕ್ ಹಿಯರಿಂಗ್ ಆದಾಗಲೂ ನೋ ಅಬ್ಜೆಕ್ಷನ್, ಮರ ಕಡಿಯುವಾಗಲೂ ನೋ ಅಬ್ಜೆಕ್ಷನ್. ಕಣ್ಣೆದುರೇ ಸಾವಿರಾರು ಮರಗಳು ಬಿದ್ದರೂ ಒಂದಿಷ್ಟೂ ಬೇಸರವಿಲ್ಲ. ಮರಗಿಡ ಬೆಳೆಸುವ ಅರಣ್ಯ ಇಲಾಖೆಯವರೇ ಮುಂದೆ ನಿಂತು ಎಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಇವರು ಒಂದು ಮರಕ್ಕೆ ಹತ್ತು ಗಿಡ ನೆಡ್ತಾರಂತೆ! ಅದಕ್ಕಂತಲೇ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಯ ಅಕೌಂಟ್ ಗೆ 60 ಲಕ್ಷ ರುಪಾಯಿ ಹಾಕಿದೆ.

ಒಂದು ಗಿಡಕ್ಕೆ ಮುನ್ನೂರು ರುಪಾಯಿಯಂತೆ ಪಡೆದು, ಅರಣ್ಯ ಬೆಳೆಸುವ ಮಹತ್ತರ ಜವಾಬ್ದಾರಿ ಅರಣ್ಯ ಇಲಾಖೆಗಿದೆ. ಇವರು ನೆಟ್ಟ ಎಲ್ಲಾ ಗಿಡಗಳು ಮರವಾಗಿದ್ದರೆ, ಉಡುಪಿ ಜಿಲ್ಲೆಗೆ ಜಿಲ್ಲೆಯೇ ಅರಣ್ಯವಾಗಬೇಕಿತ್ತು.

ಎರಡನೇ ಹಂತದಲ್ಲಿ ನೀಲಾವರದಿಂದ ಪೇತ್ರಿವರೆಗಿನ 500 ಕ್ಕೂ ಅಧಿಕ ಮರ ಕಡಿಯಲು ಬಾಕಿಯಿದೆ. ಲೋಕೋಪಯೋಗಿ ಇಲಾಖೆ ಮತ್ತೆ ಹಣ ಕೊಟ್ಟರೆ ಈ ಮರಗಳೂ ಶೀಘ್ರವೇ ಖತಂ ಆಗುತ್ತೆ.

ಕನಿಷ್ಟ ವಿರೋಧವೂ ಇಲ್ಲದೆ ಮರಗಳು ಧರಾಶಾಹಿಯಾಗುವ ದೃಶ್ಯ ಕಂಡಾಗ, ಪ್ರಕೃತಿ ಅದೆಷ್ಟು ನೊಂದಿರಬಹುದೋ ಏನೋ? ಪ್ರಕೃತಿಯ ಮುನಿಸಿಗೆ ಇನ್ನೆಷ್ಟು ಬೆಲೆ ತೆರಬೇಕಾಗಿದೆಯೋ..?   ನಿಜಕ್ಕೂ ಈ ಮೂಕ ಮರಗಳಿಗೆ ಬಾಯಿ ಬರುತ್ತಿದ್ದರೆ, ಅದೆಷ್ಟು ಬೊಬ್ಬಿಡುತ್ತಿದ್ದವೋ ಏನೋ! ಉತ್ತಮ ಪರಿಸರ ಉಡುಪಿಗೆ ಪ್ರಕೃತಿ ಕೊಟ್ಟ ವರ.

ಈ ಸುಂದರ ಕೊಡುಗೆಯನ್ನು ಉಳಿಸಿಕೊಳ್ಳೋದು ಬಿಡಿ, ಹಾಳುಗೆಡವೋದರಲ್ಲೇ ಜನರಿಗೆ ಖುಷಿ! ಜಿಲ್ಲೆಯ ಬ್ರಹ್ಮಾವರದಿಂದ ಪೇತ್ರಿವರೆಗಿನ ರಸ್ತೆಯ ಅಗಲೀಕರಣಕ್ಕೆ ಒಂದುವರೆ ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲಾಗುತ್ತಿದೆ. ಅಭಿವೃದ್ಧಿಯ ಮುಂದೆ ಪರಿಸರ ಪ್ರೀತಿ ನಿಜಕ್ಕೂ ಇಲ್ಲಿ ಅರಣ್ಯರೋಧನವಾಗಿದೆ.

bangalore

ಸ್ನೇಹಿತ್ ಔಟ್- ನಮ್ರತಾ- ಸ್ನೇಹಿತ್ ಲವ್ ಸ್ಟೋರಿಗೆ ಬ್ರೇಕ್..!

Published

on

ಬಿಗ್ ಬಾಸ್: ಬಿಗ್ ಬಾಸ್ ಮನೆ ಆಟ ಇದೀಗ 60 ದಿನಗಳ ಪೂರೈಸಿದೆ. ಪ್ರತಿ ವಾರವು ಸ್ಪರ್ಧೆಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲಿಮಿನೆಟ್ ಆಗುತ್ತಿದ್ದಾರೆ. ಈ ವಾರವು ಸ್ನೇಹಿತ್ ಔಟ್ ಆಗಿದ್ದಾರೆ.

ಹಿಂದಿನ ವಾರದಲ್ಲಿ ಸ್ನೇಹಿತ್ ನಮ್ರತಾ ಜೊತೆ ಲವ್ವಿ-ಡವ್ವಿ ವಿಷಯಗಳನ್ನು ಮಾತನಾಡುತ್ತಿದ್ದರು. ನಮ್ರತಾ ಜೊತೆ ಬೆಸ್ಟ್ ಫ್ರೇಂಡ್ ಆಗಿದ್ದ ಸ್ನೇಹಿತ್ ಟಾಸ್ಕ್ ಗಳಲ್ಲಿ ಗೆಲ್ಲುತ್ತಿದ್ದರೂ, ಕೊನೆ ಕೊನೆಗೆ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ಕ್ಯಾಪ್ಟನ್ಸಿ ಆಗಿದ್ದಾಗ ಎರಡು ತಂಡಗಳ ಜೊತೆ ಪಕ್ಷಪಾತ ಮಾಡುತ್ತಿದ್ದರು. ಒಂದು ಟೀಮ್ ಗೆ ಮಾತ್ರ ಸಪೋರ್ಟ್ ಮಾಡುತ್ತಿದ್ದರು.

ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಎಂಬ ತಂಡಗಳ ನಡುವೆ ಜಗಳಗಳು ಹೆಚ್ಚಾಗಿತ್ತು. ಇದೇ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಕಣ್ಣಿಗೆ ಪೆಟ್ಟಾಗಿದ್ದು, ಇದಕ್ಕೆ ಪರೋಕ್ಷವಾಗಿ ಸ್ನೇಹಿತೇ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿತ್ತು. ಆದರೆ ಏನೂ ಮಾತನಾಡಲೂ ಮುಂದೆ ಹೋಗಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಿತ್ ನ ನಡೆತೆಯಿಂದ ಇದೀಗ ಅವರ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ.

ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ. ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ.

ಅಂತೂ ಬಿಗ್ ಬಾಸ್ ನಿಂದ ಸ್ನೇಹಿತ್ ಔಟ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ಲವ್ ಸ್ಟೋರಿ ಬ್ರೇಕ್ ಆಗುತ್ತಾ ಅಲ್ಲ ಬಿಗ್ ಮನೆಯಿಂದ ಹೊರ ಹೋದ ಬಳಿಕ ಮುಂದುವರಿಯುತ್ತಾ ಅನ್ನೋದು ಕಾದು ನೋಡಬೇಕಷ್ಟೇ.

Continue Reading

LATEST NEWS

ಕ್ರೇಟ್‌ ಗೆ ಪಿಕಪ್ ಢಿಕ್ಕಿ-ಸಾವಿರಾರು ರೂ. ಮೌಲ್ಯದ ನಂದಿನಿ ಹಾಲು ರಸ್ತೆ ಪಾಲು

Published

on

ಉಡುಪಿ: ಮಿಲ್ಕ್ ಬೂತ್ ಎದುರು ಕ್ರೇಟ್‌ನಲ್ಲಿ ಇರಿಸಿದ್ದ ನಂದಿನಿ ಹಾಲಿನ ಶೇಖರಣೆಗೆ ಪಿಕಪ್‌ ವಾಹನವೊಂದು ಢಿಕ್ಕಿ ಹೊಡೆದು ಸಾವಿರಾರು ರೂಪಾಯಿ ಮೌಲ್ಯದ ನಂದಿನಿ ಹಾಲು ರಸ್ತೆ ಪಾಲಾದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಇಂದು ನಡೆದಿದೆ.

ಈ ಅಪಘಾತದಲ್ಲಿ ಬೈಕ್ ಹಾಗೂ ಸೈಕಲ್ ಸವಾರರಿಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಚಾಲಕನು ದ್ವಿಚಕ್ರ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಇರಿಸಿದ್ದ ಹಾಲಿನ ಕ್ರೇಟ್‌ಗಳಿಗೆ ಪಿಕಪ್‌ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಾಲಿನ ಪ್ಯಾಕೆಟ್‌ ಶೇಖರಿಸಿಟ್ಟಿದ್ದ ಕ್ರೇಟ್‌ಗಳೆಲ್ಲ ಚೆಲ್ಲಾ ಪಿಲ್ಲಿಯಾಗಿದ್ದು, ಅಪಾರ ಪ್ರಮಾಣದ ಹಾಲು ರಸ್ತೆ ಪಾಲಾಗಿದೆ. ಪಿಕಪ್ ವಾಹನ ಚಾಲಕನ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಪಿಕಪ್‌ ಚಾಲಕ ಪರಾರಿಯಾಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Kundapura: ಲಂಚ ಪ್ರಕರಣ- ಸಬ್‌ ಇನ್‌ಸ್ಪೆಕ್ಟ್ರರ್ ಶಂಭುಲಿಂಗಯ್ಯ ಅಮಾನತು

Published

on

ಕುಂದಾಪುರ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಚ್ಚಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕ‌ರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್ ಪಿ ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Continue Reading

LATEST NEWS

Trending