ಉಜಿರೆಯ 7 ತಿಂಗಳ ಗರ್ಭಿಣಿ ಮಹಿಳೆಯನ್ನು ಬಲಿ ಪಡೆದ ಕೊರೊನಾ ಮಹಾಮಾರಿ
ದುಬೈ: ಪ್ರಸ್ತುತ ದುಬೈಯಲ್ಲಿ ವಾಸವಾಗಿರುವ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೇಯಾ ರೈ (ಸೌಮ್ಯ ರೈ) ಇಂದು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶ್ರೇಯಾ ರೈ 7 ತಿಂಗಳ ಗರ್ಭಿಣಿಯಾಗಿದ್ದರು. ಕೆಲ ದಿನಗಳ ಹಿಂದೆ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ದುಬೈಯ ಖ್ಯಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಂತರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ಬೆಳಗ್ಗಿನ ಜಾವ ಇವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಮೂಲತಃ ಚಿಕ್ಕಮಗಳೂರು ಕಳಸದವರಾಗಿರುವ ಶ್ರೇಯಾ, ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ.ಧ.ಮಂ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಪಡುಬಿದ್ರಿ ಮೂಲದ ಪವನ್ ಶೆಟ್ಟಿಯವರನ್ನು ಮದುವೆಯಾದ ಬಳಿಕ ಶ್ರೇಯಾ ಗಂಡನೊಂದಿಗೆ ದುಬೈಯಲ್ಲಿ ವಾಸವಾಗಿದ್ದರು.
ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ಸದಾ ಮುಂದಿರುತ್ತಿದ್ದ ಶ್ರೇಯಾರ ನಿಧನ ವಾರ್ತೆ ಆಕೆಯ ಅಸಂಖ್ಯಾತ ಸೇಹಿತರನ್ನು ಮತ್ತು ಹಿತೈಷಿಗಳನ್ನು ಆಘಾತಕ್ಕೀಡಾಗುವಂತೆ ಮಾಡಿದೆ.
ಆಕೆಯ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅವರ ಸ್ನೇಹಿತರು ಪ್ರಾರ್ಥಿಸುತ್ತಿದ್ದಾರೆ.