ಸೌದಿ ಅರೇಬಿಯಾದಲ್ಲಿರುವ ಮಕ್ಕಾ -ಮದೀನಾಕ್ಕೆ ಉಮ್ರಾ ಯಾತ್ರೆ ತೆರಳಿದ್ದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಅಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ : ಸೌದಿ ಅರೇಬಿಯಾದಲ್ಲಿರುವ ಮಕ್ಕಾ -ಮದೀನಾಕ್ಕೆ ಉಮ್ರಾ ಯಾತ್ರೆ ತೆರಳಿದ್ದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಅಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಇಲ್ಲಿನ ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿ ನಿವಾಸಿ 66 ವರ್ಷದ ಮರಿಯಮ್ಮ ಹಾಗೂ 68 ವರ್ಷದ ಖತೀಜಮ್ಮ ಎಂದು ಗುರುತಿಸಲಾಗಿದೆ.
ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಒಟ್ಟು 34 ಮಂದಿಯ ತಂಡ ಮಾರ್ಚ್ 1 ರಂದು ಮಂಗಳೂರಿನಿಂದ ಉಮ್ರಾ ಯಾತ್ರೆ ತೆರಳಿತ್ತು.
ಇದರಲ್ಲಿ ಮೃತರು ಸೇರಿದಂತೆ ಬ್ರಹ್ಮಾವರ ತಾಲೂಕಿನ ಕೋಟ ಮಧುವನ ಅಚ್ಲಾಡಿಯ ನಾಲ್ವರು ಮಹಿಳೆಯರಿದ್ದರು.
ಇವರೆಲ್ಲ ಉಮ್ರಾ ಮುಗಿಸಿ ಮದೀನಾಕ್ಕೆ ತೆರಳುವ ತಯಾರಿಯಲ್ಲಿದ್ದು, ಈ ವೇಳೆ ಮರಿಯಮ್ಮ ಮಾರ್ಚ್ 9 ರಂದು ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ.
ಎರಡು ದಿನದ ನಂತರ ಅಂದರೆ ಮಾರ್ಚ್ 11 ರಂದು ಭಾರತದ ಕಾಲಮಾನ ಅಪರಾಹ್ನ 3 ಗಂಟೆಗೆ ಖತೀಜಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಇವರಿಬ್ಬರು ಸಂಬಂಧಿಗಳಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಮಕ್ಕಾದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.