ಮಂಗಳೂರು: ಸ್ಟೇಟ್‌ಬ್ಯಾಂಕ್ ಬಳಿ ಇರುವ ಮಂಗಳೂರು ಮೀನುಗಾರ ಮೀನು ಮಾರಾಟ ಮಹಿಳಾ ಮಂಡಳಿ ಹಾಗೂ ಹಿಂದು ಯುವ ಸೇನೆಯ ಜಂಟಿ ಆಶ್ರಯದಲ್ಲಿ ಇಂದು ಮಾರುಕಟ್ಟೆಯಲ್ಲಿರುವ ಅಶ್ವತ್ಥಕಟ್ಟೆಯಲ್ಲಿ ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಕಳೆದ 19 ವರ್ಷಗಳಿಂದ ಪ್ರತೀ ವರ್ಷವೂ ಸ್ಟೇಟ್‌ಬ್ಯಾಂಕ್ ಬಳಿ ಇರುವ ಈ ಕಟ್ಟೆಯಲ್ಲಿ ಶನೀಶ್ವರ ಪೂಜೆ, ಸತ್ಯನಾರಾಯಣ ಪೂಜೆಯನ್ನು ಮಹಿಳಾ ಮೀನುಗಾರರ ಸಂಘಟನೆ ಸದಸ್ಯರು ಆಯೋಜಿಸಿಕೊಂಡು ಬರುತ್ತಿದ್ದು, ಎರಡು ದಿನಗಳ ಕಾಲ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ.
ಬಹುತೇಕ ಎಲ್ಲಾ ಮಹಿಳೆಯರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭ ಮಾತನಾಡಿದ ಮೀನು ಮಾರುಕಟ್ಟೆ ಮಹಿಳಾ ಮಂಡಳಿ ಸಂಘಟನೆಯ ಅಧ್ಯಕ್ಷೆ ಬೇಬಿ ಅವರು, ನಮಗೆ ಕಷ್ಟಗಳು ಎದುರಾದಾಗ ನಾವು ಇಲ್ಲಿನ ದೇವರನ್ನು ಪ್ರಾರ್ಥಿಸಿದಾಗ ನಮ್ಮ ಕಷ್ಟ ದೂರವಾಗಿದೆ. ಇಲ್ಲಿ ಅಶ್ವತ್ಥ ಕಟ್ಟೆಯೊಂದನ್ನು ನಿರ್ಮಿಸಿ ಪವಿತ್ರ ಭಾವನೆಯಿಂದ ಪೂಜಿಸಿಕೊಂಡು ಬರುತ್ತಿದ್ದೇವೆ.
ಈ ಹಿಂದೆ ನಮ್ಮನ್ನು ಪಾಲಿಕೆಯು ಇಲ್ಲಿಂದ ಸ್ಥಳಾಂತರ ಮಾಡಲು ಮುಂದಾಗಿತ್ತು. ಆದರೆ ಬಳಿಕ ನಮ್ಮ ದೇವರು ಕೈಬಿಡದೇ ಕಾಪಾಡಿಕೊಂಡು ಬಂದಿದ್ದಾರೆ ಎಂದರು. ಇನ್ನು ಹಿಂದು ಯುವಸೇನೆ ಮುಖಂಡ ಭಾಸ್ಕರ ಚಂದ್ರ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಸಂಘಟನೆಯ ಧಾರ್ಮಿಕ ಕಾರ್ಯಕ್ಕೆ ನಾವು ಸದಾ ಬೆಂಬಲ ನೀಡಿಕೊಂಡು ಬರುತ್ತಿದ್ದೇವೆ ಎಂದರು.