ವಿಶೇಷ ಚೇತನ ಯುವತಿಯ ಬಾಳಿಗೆ ಬೆಳಕಾದ ದುಬೈ ಆಯಿಲ್ ಮಿಲ್ ಉದ್ಯೋಗಿ ಸಂದೀಪ್
ಉಡುಪಿ: ಇಂದು ನೂರಾರು ಮದುವೆಗಳು ಅದ್ದೂರಿಯಾಗಿ ನಡೆಯುತ್ತವೆ. ಲಕ್ಷಗಟ್ಟಲೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತದೆ ಆದರೆ ಭಿನ್ನ ಸಾಮರ್ಥ್ಯದ, ಅಂಗವೈಕಲ್ಯತೆ ಇರುವವರ ಬಾಳಿಗೆ ಬೆಳಕಾಗುವವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಹೃದಯವಂತ ಯುವಕನೊಬ್ಬ ಯುವತಿಯ ಬಾಳಿಗೆ ಬೆಳಕಾಗಿದ್ದಾರೆ…..ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಈ ಮದುವೆಯೇ ಸಾಕ್ಷಿ. ಪೊಲಿಯೋಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಬಲ ಕಳೆದುಕೊಂಡಿರುವ ಸುನೀತಾ ಪಿಯುಸಿ ವರಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಳು.
ಉಡುಪಿಯ ಕರಂಬಳ್ಳಿಯ ಸುನೀತಾ, ಎಲ್ಲರಂತೆ ತನ್ನ ಭವಿಷ್ಯದ ಕನಸು ಕಂಡವಳು. ಆದರೆ ತನ್ನ ಅಂಗವೂನತೆಗಾಗಿ ಆಕೆ ತನ್ನನ್ನೇ ಶಪಿಸುತ್ತಾ ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾನೆ. ದುಬೈ ನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುವ ಮೂಲತಃ ಮಂಗಳೂರಿನ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಿದ್ದಾರೆ.
ಮನೆಯವರ ಒಪ್ಪಿಗೆಯಂತೆ ಈ ಅಪರೂಪದ ಮದುವೆಗೆ ಉಡುಪಿಯ ಕರಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು. ಆತುರದ ನಿರ್ಧಾರ ತೆಗೆದುಕೊಳ್ಳೋದು ಸುಲಭ, ಆದರೆ ಜೀವನವಿಡೀ ನಿಭಾಯಿಸುವುದು ಕಷ್ಟ. ಆದರೆ ಈ ಜೋಡಿಯ ವಿಚಾರದಲ್ಲಿ ಹಾಗಾಗುವುದಿಲ್ಲ ಅನ್ನೋದು ಮನೆಯವರ ಅಭಿಪ್ರಾಯ.
ಇಂತಹಾ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ.
ಇನ್ನೇನು ಮನೆಮಗಳ ಬಾಳು ನರಕವಾಯ್ತು ಎಂದು ದಿವೂ ಕೊರಗುತ್ತಿದ್ದ ಸುನಿತಾ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರಾದಷ್ಟು ಸಂತೋಷ, ಮದುವೆ ಮುಗುಯುವವರೆಗೂ ಆನಂದ ಬಾಷ್ಪ ಸುರಿಸಿ ಪ್ರೀತಿಯ ಮಗಳನ್ನು ಬೀಳ್ಕೊಟ್ಟಿದ್ದಾರೆ.
ತನ್ನ ಕಷ್ಟ ಹೇಳಿಕೊಂಡು ಸುನಿತಾ ಮದುವೆಯಾಗಲಿಲ್ಲ, ತಾನು ಆದರ್ಶ ಮೆರೆದಿದ್ದೇನೆಂಬ ಹಮ್ಮ ಬಿಮ್ಮು ಸಂದೀಪ್ ಗೆ ಇಲ್ಲ, ಹಾಗಾಗಿ ಮದುವೆಗೆ ಬಂದವರು ಕೂಡಾ ಹೃದಯತುಂಬಿ ದಂಪತಿಗೆ ಹರಸಿ ಹೊಟ್ಟೆ ತುಂಬಾ ಊಟ ಮಾಡಿದ್ದಾರೆ. ಒಟ್ಟಿನಲ್ಲಿ ಈ ದಂಪತಿ ಬಾಳು ಹಸನಾಗಲೀ, ನೂರ್ಕಾಲ ಈ ಜೋಡಿ ಸುಖವಾಗಿರಲಿ ಅನ್ನೋದೇ ಎಲ್ಲರ ಹಾರೈಕೆ