ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ, ಬಡಗುಂಡಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಗುಡ್ಡ ಜರಿದ ಪರಿಣಾಮ ರಸ್ತೆಯ ಬದಿಯಲ್ಲಿದ್ದ ಎರಡು ವಿದ್ಯುತ್ ಕಂಬಗಳು ಧರೆಗುಳಿದರೆ, ರಸ್ತೆಗೆ ಮಣ್ಣು ಬಿದ್ದಿದೆ. ಬಿಸಿರೋಡು ಪುಂಜಾಲಕಟ್ಟೆ ರಸ್ತೆ ನಿರ್ಮಾಣ ಕಾಮಗಾರಿಯ ವೇಳೆ ರಸ್ತೆಯ ಬದಿಯಲ್ಲಿರುವ ಗುಡ್ಡಗಳನ್ನು ಜರಿದು ಅಗಲೀಕರಣ ಮಾಡಲಾಗಿತ್ತು.
ರಸ್ತೆಯ ಇಕ್ಕೆಲಗಳಲ್ಲಿ ಅಗಲೀಕರಣದ ಬಳಿಕ ಅವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಕಳೆದ ವರ್ಷವೂ ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಮೇಲೆ ಗುಡ್ಡ ಜರಿದು ಕಂಬಗಳಿಗೆ ಹಾನಿಯಾಗಿತ್ತಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.
ಸುಮಾರು ಅರ್ಧ ತಾಸಿಗಿಂತಲೂ ಅಧಿಕವಾಗಿ ಸಂಚಾರಕ್ಕೆ ಅಡಚಣೆಯಾಗಿತ್ತು. ಆ ಬಳಿಕ ಜೆಸಿಬಿ ಮೂಲಕ ವಿದ್ಯುತ್ ಕಂಬಗಳನ್ನು ಹಾಗೂ ಮಣ್ಣು ತೆರವು ಮಾಡಲಾಯಿತು.
ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.