ಮಳೆಗಾಲದ ಅಪರೂಪದ ಅತಿಥಿ ಈ ‘ದೇವರ ಹುಳ’..!
ಚಿತ್ರ ವರದಿ :ಸಿಂಧೂ ಶ್ರೀ
ಕುಮಟ : ಜಗತ್ತಿನ ಸರಿಸುಮಾರು ಎಲ್ಲಾ ಪ್ರ ದೇಶಗಳಲ್ಲಿ ಕಂಡುಬರುವ ಈ ಹುಳ ರೈನ್ ಬಗ್. ಆದ್ರೆ ನಮ್ಮ ಆಡು ಭಾಷೆಯಲ್ಲಿ ಇದು ದೇವರ ಹುಳ ಎಂದೇ ಖ್ಯಾತಿ ಪಡೆದಿದೆ.
ಜೀವ ಜಗತ್ತಿನಲ್ಲಿ ಈ ಪುಟ್ಟ ಜೀವಿಯದು ಅಗ್ರಸ್ಥಾನ. ಇದರ ಉಜ್ವಲ ಮತ್ತು ಗಾಡ ಕೆಂಪು ಬಣ್ಣ. ಮೆತ್ತನೆಯ ವೆಲ್ವೆಟ್ ಬಟ್ಟೆಯಂತಹ ದೇಹಸಿರಿ. ಚುರುಕಾಗಿ ಅಲ್ಲಿಂದಿಲ್ಲಿಗೆ ಇಂಲ್ಲಿಂದಲ್ಲಿಗೆ ಓಡಾಡುವ ಪರಿ, ಸ್ಪರ್ಶಿಸಿದೊಡನೆ ಚುರುಕಾಗಿ ದೇಹದೊಳಗೆ ಮಡಚಿಕೊಂಡು ಬಿಡುವ ಪುಟ್ಟ ಎಂಟು ಕಾಲ್ ಗಳು ಎಲ್ಲವೂ ತುಂಬಾ ಆಕರ್ಷಣೀಯ.
ದೇವರ ಹುಳ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಟ್ರೊಂಬಿಡಿಯಂ ಹೋಲೋಸೆರಿಸಂ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮನೆಯ ಅಂಗಳದಲ್ಲಿ, ಮಲೆನಾಡಿನ ಬಯಲುಗಳಲ್ಲಿ ಕಾಣ ಸಿಗುತ್ತಿದ್ದ ಈ ಪುಟ್ಟ ಜೀವಿ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗಿದೆ.
ಉಣುಗಿನ ಜಾತಿಗೆ ಸೇರಿದ ಅತೀ ದೊಡ್ದದಾದ ಈ ವೆಲ್ವೆಟ್ ಉಣುಗು ಬಾಲ್ಯಾವಸ್ಥೆಯಲ್ಲಿ ಮಾತ್ರ ಪರಾವಲಂಬಿಯಾಗಿದೆ , ಬೆಳೆದ ಮೇಲೆ ಗೆದ್ದಲು ಮತ್ತಿತರ ಚಿಕ್ಕ ಪುಟ್ಟ ಕೀಟಗಳನ್ನು ಬೇಟೆಯಾಡಿ ತಿನ್ನುವ ಸಮರ್ಥ ಬೇಟೆಗಾರ ಕೂಡ ಹೌದು.
ಇದರ ವಿಶೇಷವೆಂದರೆ ಉಜ್ವಲವಾದ ಕೆಂಪು ಬಣ್ಣ ಇದನ್ನು ಹಿಡಿದು ತಿನ್ನಲು ಬರುವ ವೈರಿಗೆ ಕೆಟ್ಟ ರುಚಿ ಎಂಬ ಎಚ್ಚರಿಕೆ ನೀಡುತ್ತದಂತೆ.
ಬೇರೆ ಜೀವಿಗಳು ಸ್ಪರ್ಶಿಸಿದಾಗ ರಕ್ಷಣೆಗಾಗಿ ಇದು ತನ್ನ ಎಂಟು ಕಾಲ್ಗಳನ್ನು ಮಡಚಿಕೊಂಡು ಮುದ್ದೆಯಂತೆ ಸ್ಥಬ್ದವಾಗುತ್ತದೆ. ಆಪಾಯವಿಲ್ಲವೆಂದು ಅನ್ನಿಸಿದರೆ ಚಲಿಸುತ್ತದೆ. ಜೊತೆಗೆ ಇದು ಹೆಚ್ಚಿನ ಸಮಯ ಮಣ್ಣಿನಲ್ಲೇ ಇರುವುದರಿಂದ ಫಂಗಸ್ , ಬ್ಯಾಕ್ಟೀರಿಯಗಳಿಂದ ಸೋಂಕಿಗೊಳಗಾಗದಂತೆ ತಡೆಯುವ ಕಿಣ್ವಗಳನ್ನು ಹೊಂದಿದೆ.
ಮಳೆಗಾಲದ ಪ್ರಾರಂಭದಲ್ಲಿ ಕೇವಲ ಒಂದೆರಡು ವಾರ ಮಾತ್ರ ಕಾಣಿಸಿಕೊಳ್ಳುವ ಇವು ನಂತರ ಮತ್ತೆ ಮಣ್ಣಿನಲ್ಲಿ ಅಡಗಿಬಿಡುತ್ತವೆ. ಹೀಗೆ ಮಣ್ಣಿನಿಂದ ಹೊರಬಂದಾಗ ಸಂಗಾತಿಯನ್ನು ಹುಡುಕಿ ವಂಶಾಭಿವೃದ್ದಿಕಾರ್ಯ ನಡೆಸುತ್ತವೆ.
ಮಣ್ಣಿನಲ್ಲಿಟ್ಟ ಇದರ ಮೊಟ್ಟೆಗಳು ಒಡೆದು ಹೊರಬರುವುದು ತಿಂಗಳ ನಂತರ ಅದೂ ಕೂಡ ಅದರ ಹೋಸ್ಟ್ ಕೀಟದ ವಂಶಾಭಿವೃದ್ದಿಯ ಸಮಯದಲ್ಲೇ .ಒಂದೆರಡು ವಾರಗಳವರೆಗೆ ಬೇರೆ ಕೀಟದ ಮೇಲೆ ಬದುಕುವ ಈ ಮರಿಗಳು ನಂತರ ಮಣ್ಣಿನಲ್ಲಿ ತಮ್ಮ ಜೀವನ ಮುಂದುವರೆಸುತ್ತವೆ.